ಬೇಲೂರು: ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಸಿಕೊಂಡಂತೆ ಕುಣಿಯುತ್ತಿರುವ ಬೇಲೂರು ತಾಲೂಕಿನ ಬಿಜೆಪಿ ಮುಖಂಡರ ಕಚ್ಚಾಟ ಇಂದು ವಿಜಯ ಸಂಕಲ್ಪ ಯಾತ್ರೆಗೆ ಬಂದಿದ್ದ ಬಿಜೆಪಿ ವರಿಷ್ಠರಿಗೂ ಬಿಸಿ ಮುಟ್ಟಿಸಿದ್ದು, ಈ ಕಚ್ಚಾಟದಿಂದ ಬೇಸತ್ತ ಬಿಜೆಪಿ ವರಿಷ್ಠರು ಇಂದು ಬೇಲೂರಿನಲ್ಲಿ ನಡೆಯಬೇಕಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಕಲೇಶಪುರಕ್ಕೆ ತೆರಳಿದ ಪ್ರಸಂಗಕ್ಕೆ ಬೇಲೂರು ಬಿಜೆಪಿಯ ನಾಯಕರು ಸಾಕ್ಷಿಯಾದರು.
ಇಂದು ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ನಿಂದ ವಿಜಯ ಸಂಕಲ್ಪ ಯಾತ್ರೆ ಅರಂಭಗೊಂಡಿದ್ದು, ಬೆಳಗ್ಗೆ ೧೦ ಗಂಟೆಗೆ ಆರಂಭವಾಗಬೇಕಿದ್ದ ಯಾತ್ರೆಯನ್ನು ೧೨ಕ್ಕೆ ಆರಂಭಿಸಲಾಯಿತು. ಯಾತ್ರೆಯಲ್ಲಿ ಕೇಂದ್ರ ಸಚಿವರುಗಳಾದ ಪ್ರಹ್ಲಾದ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಈ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಗಳು ವಿಜಯ ಸಂಕಲ್ಪ ಯಾತ್ರೆಯಲ್ಲಿ ಸೇರಿದ್ದ ಜನರನ್ನೇ ತಮ್ಮ ಸಾಧನೆಯಂತೆ ಬಿಂಬಿಸಿಕೊಳ್ಳಲು ತಮ್ಮ ತಮ್ಮೊಳಗೆ ಜಿದ್ದಿಗೆ ಬಿದ್ದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು.
ಬಳಿಕ ವಿಜಯ ಸಂಕಲ್ಪ ಯಾತ್ರೆ ಬೇಲೂರು ತಾಲೂಕಿನ ಹಳೇಬೀಡಿಗೆ ಆಗಮಿಸಿದ ವೇಳೆ ಪೂರ್ವ ನಿಗದಿಯಂತೆ ಇಲ್ಲಿಯ ಅಣ್ಣಪ್ಪ ಶೆಟ್ಟಿ ಎಂಬುವವರ ಮನೆಯಲ್ಲಿ ಕಾಫಿ ಕುಡಿಯುವ ವೇಳೆ ಮನೆಯಿಂದ ಹೊರ ಭಾಗದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಶಕ್ತಿ ಪ್ರದರ್ಶನ ಹಾಗೂ ಜೈಕಾರಗಳು ಕೇಂದ್ರ ಸಚಿವರುಗಳಿಗೆ ಇರುಸು ಮುರುಸು ಉಂಟು ಮಾಡಿತು.
ಒಂದು ಗುಂಪು ಹೆಚ್.ಕೆ. ಸುರೇಶ ಪರವಾಗಿ ಜೈಕಾರ ಕೂಗಿದರೆ, ಮತ್ತೊಂದು ಗುಂಪು ಸಿದ್ದೇಶ ನಾಗೇಂದ್ರ ಪರವಾಗಿ ಘೋಷಣೆ ಕೂಗುತ್ತಿತ್ತು. ಮಗದೊಂದು ಗುಂಪು ಸಂತೋಷ ಕೆಂಚಾಂಬ ಪರವಾಗಿ ಘೋಷಣೆ ಕೂಗುತ್ತಿತ್ತು. ಜೈಕಾರಗಳು ಅತಿರೇಕಕ್ಕೆ ಹೋಗಿದ್ದರಿಂದ ತೀವ್ರ ಮುಜುಗರಕ್ಕೊಳಗಾದ ವರಿಷ್ಠರು ಬೇಲೂರು ತಾಲೂಕಿನಲ್ಲಿ ಸಾಗಬೇಕಿದ್ದ ವಿಜಯ ಸಂಕಲ್ಪ ಯಾತ್ರೆಯನ್ನು ರದ್ದುಗೊಳಿಸಿ, ಹಳೇಬೀಡಿನಿಂದ ಬೇಲೂರು ಮಾರ್ಗವಾಗಿ ಹಾಗೂ ಬೇಲೂರಿನಿಂದ ಅರೇಹಳ್ಳಿ ಮಾರ್ಗವಾಗಿ ಸಾಗಿ ಸಕಲೇಶಪುರಕ್ಕೆ ತೆರಳಬೇಕಿದ್ದ ಕೇಂದ್ರ ಸಚಿವರುಗಳಾದ ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್ ಜೋಶಿರವರು ಹೆಲಿಕಾಫ್ಟರ್ ಮೂಲಕ ಹಳೇಬೀಡಿನಿಂದ ನೇರವಾಗಿ ಸಕಲೇಶಪುರ ತಲುಪಿದರು.
ಕೈ ಕೈ ಮಿಲಾಯಿಸಲು ಮುಂದಾದ ಗುಂಪುಗಳು
ಹಳೇಬೀಡಿನಲ್ಲಿ ಕೇಂದ್ರ ಸಚಿವರುಗಳು ಸಂಘಟನಾತ್ಮಕವಾಗಿ ಕಾರ್ಯಕರ್ತರ ಮನೆಯಲ್ಲಿದ್ದ ವೇಳೆ ಬೇಲೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಬೆಂಬಲಿಗರು ಮನೆಯ ಹೊರ ಭಾಗದಲ್ಲಿ ಗುಂಪುಗಳಾಗಿ ಕೈ-ಕೈ ಮಿಲಾಯಿಸುವ ಹಂತಕ್ಕೆ ಮುಂದಾಗಿದ್ದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪೊಲೀಸರು ಎಲ್ಲಾ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಒಗ್ಗಟ್ಟಿನ ಮಂತ್ರ ಪಠಿಸಿದ ಸಂತೋಷ್ ಕೆಂಚಾಂಬ
ಹಳೇಬೀಡಿನಿಂದ ಬೇಲೂರು ಮಾರ್ಗವಾಗಿ ಸಚಿವರೊಂದಿಗೆ ತೆರಳಬೇಕಿದ್ದ ವಿಜಯ ಸಂಕಲ್ಪ ರಥವು ಸಚಿವರುಗಳ ಅನುಪಸ್ಥಿತಿಯಲ್ಲಿ ಬೇಲೂರಿಗೆ ಬಂದ ವೇಳೆ ಬೇಲೂರಿನ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಸಿದ್ದೇಶ್ ನಾಗೇಂದ್ರ ಹಾಗೂ ಸಂತೋಷ ಕೆಂಚಾಂಬ ಅವರು ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲಾ ಒಗ್ಗಟ್ಟಾಗಿದ್ದು, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಾಗಿ ಹೇಳುವ ಮೂಲಕ ಹಳೇಬೀಡಿನಲ್ಲಿ ನಡೆದ ಸಂಘರ್ಷ ತಣಿಸಲು ಯತ್ನಿಸಿದರು. ಬಳಿಕ ವಿಜಯ ಸಂಕಲ್ಪ ರಥವು ಸಕಲೇಶಪುರದತ್ತ ಸಾಗಿತು.