ಹಾಸನ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತಕ್ಕೆ ಬೇಸತ್ತು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಜನರು ಬೆಂಬಲ ಸೂಚಿಸಿದ್ದು ಗೆಲುವಿಗೆ ಸಹಕರಿಸಿದ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ದೇವರಾಜೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣಾ ಪೂರ್ವ ಸಮೀಕ್ಷೆ ನಿಜವಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಮುಂದಿನ ಒಂದು ವರ್ಷದಲ್ಲಿ ಬರುವಂತಹ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷದ ಬಲವರ್ಧನೆಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಇತರೆ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡಿದ್ದು, ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಿವಲಿಂಗೇಗೌಡರು ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದಾರೆ ಇದರಿಂದ ಪಕ್ಷಕ್ಕೆ ಅಲ್ಪ ತೃಪ್ತಿ ದೊರೆತಿದ್ದು, ಮುಂದಿನ ಚುನಾವಣೆಗಳಲ್ಲಿ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಕೆಎಂ ಶಿವಲಿಂಗೇ ಗೌಡರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ನಿಟ್ಟಿನಲ್ಲಿ ಮನವಿ ಮಾಡುವುದಾಗಿ ಹೇಳಿದ ಅವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿರುವ ಕುರಿತು ಜಿಲ್ಲೆಯ ಕೆಲ ಮುಖಂಡರ ಹೆಸರು ಕೇಳಿ ಬರುತ್ತಿದ್ದು, ಈ ಸಂಬಂಧ ನಿರ್ದಿಷ್ಟ ದೂರುಗಳು ಬಂದಲ್ಲಿ ಕೆಪಿಸಿಸಿ ಗಮನಕ್ಕೆ ತರಲಾಗುವುದು ಎಂದು ದೇವರಾಜೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಕುಮಾರ, ಅಬ್ದುಲ್ ಹಕೀಂ, ಮಲ್ಲಿಗೆವಾಳು ದೇವಪ್ಪ, ಚಂದ್ರಶೇಖರ, ಪ್ರಕಾಶ, ಜಗದೀಶ ಇದ್ದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸಂಪೂರ್ಣ ಬಹುಮತ ಪಡೆಯದಿದ್ದಲ್ಲಿ ವಿಸರ್ಜನೆ ಮಾಡುವುದಾಗಿ ಜೆಡಿಎಸ್ ಪಕ್ಷದ ವರಿಷ್ಠ ಎಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದರು. ಇಂದು ಪಕ್ಷ ಕಳೆದ ಬಾರಿಗಿಂತ ಕಳಪೆ ಪ್ರದರ್ಶನ ನೀಡಿದ್ದು ಕುಮಾರಸ್ವಾಮಿ ಅವರ ಮಾತಿಗೆ ಬದ್ಧರಾಗುವರೆ ಎಂದು ಪ್ರಶ್ನಿಸಿದರು.