ನುಗ್ಗೇಹಳ್ಳಿ: ರಾಜ್ಯದ ರೈತ ದೃಷ್ಟಿಯಿಂದ ರೈತ ಸಂಘದ ಅಭ್ಯರ್ಥಿಯಾಗಿ ಮೇಲುಕೋಟೆ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರನ್ನಾಗಿ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಮುದ್ರಹಳ್ಳಿ ರಾಮಚಂದ್ರು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಿದರು.
ಹೋಬಳಿ ರೈತರ ಸಂಘ ಘಟಕದ ವತಿಯಿಂದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುವ ಸಲುವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರೈತ ಸಂಘದ ಮುಖಂಡರಾಗಿದ್ದ ಪುಟ್ಟಣ್ಣಯ್ಯನವರು ಶಾಸಕರಾಗಿದ್ದ ಸಂದರ್ಭದಲ್ಲಿ ಯಾವುದೇ ಸರ್ಕಾರವಿದ್ದರೂ ರೈತರ ಪರವಾಗಿ ಮಾತನಾಡುತ್ತಿದ್ದರು. ಕೆಲವು ವಿಚಾರಗಳಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಸಹ ಮಾಡುತ್ತಿದ್ದರು. ಅವರು ಇಡೀ ರಾಜ್ಯದ ರೈತರ ಪರವಾಗಿ ಅಧಿವೇಶನಗಳಲ್ಲಿ ಧ್ವನಿ ಎತ್ತುತ್ತಿದ್ದರು.
ಅವರ ಪುತ್ರರಾದ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಶಾಸಕರಾಗಿ ಆಯ್ಕೆಗೊಂಡಿದ್ದು, ಅವರ ಗೆಲುವಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನೇ ಹಾಕದೆ ರೈತ ಸಂಘದ ಅಭ್ಯರ್ಥಿಗೆ ಹೆಚ್ಚಿನ ಸಹಕಾರ ನೀಡಿ ಅವರ ಆಯ್ಕೆಗೆ ಸಹಕರಿಸಿದರು. ಇದರ ಜೊತೆಗೆ ರೈತ ಸಂಘದ ಮುಂಚೂಣಿ ನಾಯಕನಾಗಿರುವ ಹಾಗೂ ಶಾಸಕರಾಗಿ ಆಯ್ಕೆಗೊಂಡಿರುವ ದರ್ಶನ್ ಪುಟ್ಟಣ್ಣಯ್ಯನವರಿಗೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಖಾತೆ ನೀಡುವಂತೆ ಒತ್ತಾಯಿಸಲಾಗುತ್ತಿದ್ದು ನಮ್ಮ ಮನವಿಗೆ ಕಾಂಗ್ರೆಸ್ ಪಕ್ಷ ಸ್ಪಂದಿಸುವ ನಂಬಿಕೆ ನಮಗಿದೆ ಎಂದರು.
ಹೋಬಳಿ ಅಧ್ಯಕ್ಷ ಸೋಮ ಶೇಖರಯ್ಯ ಮಾತನಾಡಿದರು. ಸಭೆಯಲ್ಲಿ ರೈತ ಸಂಘದ ಪ್ರಮುಖರಾದ ಹುಲ್ಲೇನಹಳ್ಳಿ ಶಿವಣ್ಣ, ರಾಮಕೃಷ್ಣ, ಕುಮಾರ್, ಸಮುದ್ರವಳಿ ಜಗದೀಶ, ಕಂಬೇಗೌಡ, ಅಗ್ರಹಾರ ಬೆಳಗುಲಿ ಶಿವಸ್ವಾಮಿಗೌಡ, ಆಟೋ ರಘು, ಮಂಜುನಾಥ, ಕೆ ಹೊಸೂರು ಶಿವರಾಂ ಸೇರಿದಂತೆ ಇತರರು ಹಾಜರಿದ್ದರು.