ಹಾಸನ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಸನ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವ ಹಾಲಿ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಬೆಂಬಲ ಸೂಚಿಸುವುದಾಗಿ ದಲಿತ ಮುಖಂಡ ಆರ್.ಪಿ.ಐ ಸತೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರು ಹಾಸನ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನಗರಸಭೆ ವ್ಯಾಪ್ತಿಯ ಶ್ರೀನಗರ, ರಾಜಕುಮಾರ್ ನಗರ ಸೇರಿದಂತೆ ಕೆಲ ಸ್ಲಂ ನಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರವನ್ನು ಒದಗಿಸಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳಿಗೆ ಘನತೆಯಿಂದ ವ್ಯಾಪಾರ ವಹಿವಾಟು ನಡೆಸಲು ನೆರವಾಗುವಂತೆ ಫುಡ್ ಕೋರ್ಟ್ ಅನ್ನು ತೆರೆದು ಸಹಾಯ ಮಾಡಿದ್ದಾರೆ. ಅಂತೆಯೇ ಆಂಬುಲೆನ್ಸ್ ತಂಗುದಾಣ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದರು.
ನಗರದಲ್ಲಿ ಉತ್ತಮವಾದ ಯುಜಿಡಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ಉತ್ತಮ ರಸ್ತೆಗಳು ಅವರ ಅಭಿವೃದ್ಧಿಗೆ ಪೂರಕವಾದ ಕೆಲಸಗಳಾಗಿದ್ದು ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತ ಸಂಘಟನೆಯಿಂದ ಬೆಂಬಲ ಸೂಚಿಸುವುದಾಗಿ ಹೇಳಿದರು. ಏಪ್ರಿಲ್ 14ರಂದು ಪ್ರೀತಮ್ ಗೌಡ ಅವರ ನೇತೃತ್ವದಲ್ಲಿ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದು, ದಲಿತ ಸಂಘಟನೆ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂದು ತಿಳಿಸಿದರು.
ಪ್ರೀತಮ್ ಜೆ ಗೌಡ ಅವರ ಆಡಳಿತ ಅವಧಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಜಾತಿ ಸಂಘರ್ಷ ನಡೆದಿಲ್ಲ. ಸಣ್ಣ ಪುಟ್ಟ ಘಟನೆಗಳು ಶಾಸಕರ ನೇತೃತ್ವದಲ್ಲಿ ಸಮಸ್ಯೆಗಳು ಬಗೆಹರಿದಿರುವುದನ್ನು ಕಾಣಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ, ಕುಮಾರಸ್ವಾಮಿ, ಜಗದೀಶ, ರಾಜೇಶ, ಧರ್ಮ ಇದ್ದರು.