ಹಾಸನ: ಸಿಲಿಂಡರ್ ಬೆಲೆ ಸೇರಿದಂತೆ ದಿನನಿತ್ಯ ಬಳಸುವ ಅಗತ್ಯ ಪದಾರ್ಥಗಳ ಬೆಲೆ ಏರಿಕೆ ವಿರೋಧಿಸಿ ರಾಜ್ಯ-ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಿಂದ ಭಿತ್ತಿಪತ್ರ ಹಿಡಿದು ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು 40% ಕಮಿಷನ್ ಸರಕಾರ ಮತ್ತು ಬಡವರ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್ ಕಾರ್ಯಕರ್ತರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೇವರಾಜೇಗೌಡ ಬೆಲೆ ಏರಿಕೆಯಿಂದ ದೇಶದ ಜನಸಾಮಾನ್ಯರು ತೆರಿಗೆ ಪಾವತಿಸದೇ ತತ್ತರಿಸುತ್ತಿದ್ದಾರೆ ಬಡವರ ಮೇಲೆ ಹೊರೆಸಿರುವ ಸಿಲಿಂಡರ್ ಮತ್ತು ಜಿಎಸ್ ಟಿ ತೆರಿಗೆಯನ್ನು ಕೂಡಲೇ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದ್ದಾರೆ. ಗೃಹಬಳಕೆ ಸಿಲಿಂಡರ್ ಬೆಲೆ 1050 ದರ ನಿಗದಿಯಾಗಿತ್ತು. ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ. ಏರಿಕೆಯಾಗಿದೆ. ಈ ಪರಿಷ್ಕರಣೆಯೊಂದಿಗೆ ಪ್ರತಿ ಸಿಲಿಂಡರ್‌ನ ಬೆಲೆ 1103 ರೂ ಏರಿಕೆ ಆಗಿದೆ. ಕಚ್ಚಾ ತೈಲ ಬೆಲೆ ಕುಸಿದರೂ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನು ಮೇಲಿಂದ ಮೇಲೆ ಏರಿಕೆ ಮಾಡುತ್ತಾ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲೋಕಾಯುಕ್ತ ದಾಳಿಯಲ್ಲಿ ಪ್ರಶಾಂತ ಮಾಡಾಳ್ ಅವರು ಲಂಚ ಸ್ವೀಕರಿಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದೆ. ಅಲ್ಲದೇ ಅವರ ಮನೆ ಮೇಲೆ ದಾಳಿ ನಡೆಸಿದಾಗಲೂ ಸುಮಾರು ಆರು ಕೋಟಿ ರೂ. ಅನಧಿಕೃತ ಹಣ ಪತ್ತೆಯಾಗಿದೆ. ಇಷ್ಟಾದರೂ ಬೊಮ್ಮಾಯಿ ಸರ್ಕಾರ ಶಾಸಕ ಮಾಡಾಳ್ ವಿರೂಪಾಕ್ಷ ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದು, ಈ ಕೂಡಲೇ ಶಾಸಕರನ್ನು ಸಹ ಬಂಧನ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಹೆಚ್.ಕೆ ಮಹೇಶ ಮಾತನಾಡಿ, ಪ್ರಧಾನಿ ಮೋದಿ ಅವರು ಕೇವಲ ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ, ರೋಡ್ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರಿತಪಿಸುತ್ತಿದ್ದು ಈ ಬಗ್ಗೆ ಕಿಂಚಿತ್ತು ಯೋಚನೆಯನ್ನು ಮಾಡುತ್ತಿಲ್ಲ. ಬೊಮ್ಮಾಯಿ ನೇತೃತ್ವ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಸಾಮಾನ್ಯ ಜನರು ಸೇರಿದಂತೆ ಯುವಕರಿಗೆ, ಮಹಿಳೆಯರಿಗೆ ಅಗತ್ಯ ಸೌಲಭ್ಯ ಒದಗಿಸಲು ವಿಫಲವಾಗಿರುವ ಇಂತಹ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಜನರೇ ಕಿತ್ತೊಗೆಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಈ.ಎಚ್.ಲಕ್ಷ್ಮಣ, ಬನವಾಸೆ ರಂಗಸ್ವಾಮಿ, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್ ಗೊರೂರು, ತಾರಾ ಚಂದನ, ಶಿವಕುಮಾರ, ದ್ಯಾವಪ್ಪ, ಇತರರು ಭಾಗವಹಿಸಿದ್ದರು.