ಹಾಸನ: ಹೊಳೆನರಸೀಪುರದಲ್ಲಿ ತಹಶೀಲ್ದಾರ್ ಮತ್ತು ಡಿವೈಎಸ್‌ಪಿ ಅವರು ಪಕ್ಷಪಾತ ನೀತಿ ಅನುಸರಿಸುತ್ತಿದ್ದು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳನ್ನ ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಜಿಲ್ಲಾ ಕಾಂಗ್ರಸ್ ಮಾಧ್ಯಮ ವಕ್ತಾರ ದೇವರಾಜೇಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಳೆ ನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಒಂದು ಕುಟುಂಬಕ್ಕೆ ಸೇರಿದಂತೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇದನ್ನ ಪ್ರಶ್ನಿಸಲು ಹೋದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸೆಗಿದ್ದಾರೆ ಎಂದು ದೂರಿದರು.
ಮುಜರಾಯಿ ಇಲಾಖೆಯಲ್ಲಿ ಒಂದು ಕಾರ್ಯಕ್ರಮ ಅಥವಾ ಉತ್ಸವ ನಡೆಯಬೇಕಾದರೆ ಅಲ್ಲಿನ ಅಧಿಕಾರಿಗಳು ಸಾರ್ವಜನಿಕರಿಂದ ಮತ್ತು ಭಕ್ತರ ಸಹಕಾರದಿಂದ ಉತ್ಸವ ಮಾಡಬೇಕು ಆದರೆ ಅಧಿಕಾರಿಗಳು ಭಿತ್ತಿಪತ್ರದಲ್ಲಿ ಒಂದು ಕುಟುಂಬದ ಪರವಾಗಿ ಆಹ್ವಾನ ನೀಡಿರುವುದು ಅಲ್ಲದೆ ಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನವಿ ಮಾಡಿದರೂ ಕೂಡ ಅದಕ್ಕೆ ಅವಕಾಶ ಕೊಡದೆ ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.
ಪ್ರಸಾದ ಹಂಚಿಕೆಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಮತ್ತು ಮುಖಂಡರು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರು ಮತ್ತು ಅಲ್ಲಿನ ಜೆಡಿಎಸ್ ಕಾರ್ಯಕರ್ತರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ತಹಶೀಲ್ದಾರ್ ವಿಶ್ವನಾಥ ಮತ್ತು ಡಿವೈಎಸ್‌ಪಿ ಮುರಳಿಧರ ಇವರು ಪಕ್ಷಪಾತ ನೀತಿ ಅನುಸರಿಸುತ್ತಿದ್ದು ಇವರನ್ನ ತಕ್ಷಣವೇ ವರ್ಗಾವಣೆ ಮಾಡಬೇಕು ಇಲ್ಲವಾದರೆ ಇವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇವಾ ದಳದ ಜಿಲ್ಲಾಧ್ಯಕ್ಷ ದಿನೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಯೂಂ, ಕಾಂಗ್ರಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ಚಂದ್ರಶೇಖರ ಇದ್ದರು.