ಹೊಳೆನರಸೀಪುರ: ಹೆಚ್.ಡಿ.ರೇವಣ್ಣ ಅವರ ಸುಭದ್ರ ಕೋಟೆಯೆಂದೇ ಖ್ಯಾತವಾಗಿದ್ದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಪಟ್ಟಣದಲ್ಲಿ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ ತಾಯಿ ಅನುಪಮ ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು, ಅವರುಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಶ್ರೇಯಸ್ ಪಟೇಲ್ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಹಾದು ಗಾಂಧಿ ವೃತ್ತದವರೆಗೆ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಗೆ ತೆರಳಿ ಚುನಾವಣಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಗಾಂಧಿ ವೃತ್ತದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಶ್ರೇಯಸ್ ಪಟೇಲ್ ಜನರು ಬದಲಾವಣೆ ಬಯಸಿದ್ದಾರೆ. ತಾಲೂಕಿನಲ್ಲಿ ನಡೆಯುತ್ತಿರುವ ಚಕ್ರಾದಿಪತ್ಯ ಅಂತ್ಯ ಹಾಡಲು ಜನರೇ ಬಯಸಿದ್ದಾರೆ. ದೌರ್ಜನ್ಯ, ದುರಾಡಳಿತದ ವಿರುದ್ಧ ಜನರು ಬೇಸತ್ತಿದ್ದಾರೆ. ಏಕ ಚಕ್ರಾದಿಪತ್ಯವನ್ನು ಈ ಚುನಾವಣೆಯಲ್ಲಿ ಕೊನೆಗಾಣಿಸಲಿದ್ದಾರೆ. ನಾನು ಜನರ ಪರ ಕೆಲಸ ಮಾಡುತ್ತೇನೆಂದು ಘೋಷಿಸಿದರು.
ಕುಟುಂಬ ರಾಜಕಾರಣವನ್ನು ಹೊಳೆನರಸೀಪುರದಲ್ಲಿ ಜನರು ಕೊನೆಗಾಣಿಸಲಿದ್ದು ಹೊಳೆನರಸೀಪುರ ಕ್ಷೇತ್ರವನ್ನು ಅಭಿವೃದ್ದಿಯಾಗದೆ ಅವರ ಮನೆ ಮತ್ತು ಅವರ ಕುಟುಂಬ ಅಭಿವೃದ್ಧಿ ಹೊಂದಿರುವುದು ಇಡೀ ತಾಲೂಕಿಗೆ ತಿಳಿದಿದೆ ಎಂದ ಅವರು ರೇವಣ್ಣ ಕುಟುಂಬಕ್ಕೆ ಅಧಿಕಾರ ಕೊಟ್ಟಿರುವುದು ಸಾಕು ಈ ಬಾರಿ ನಮಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರಲ್ಲದೆ ಸ್ವಾಭಿಮಾನಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕೈ ಮುಗಿದು ವಿನಂತಿಸಿದರು.
ಈ ವೇಳೆ ಪತ್ನಿ ಅಕ್ಷತಾ, ತಾಯಿ ಅನುಪಮಾ ಮಹೇಶ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈ .ಹೆಚ್. ಲಕ್ಷ್ಮಣ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ, ವಕೀಲರಾದ ವಿಶ್ವನಾಥ, ಮುಜಾಹಿದ್ ಪಾಶ, ಬಾಗೀವಾಳು ಮಂಜೇಗೌಡ, ಸುದರ್ಶನ ಮತ್ತಿತರರು ಹಾಜರಿದ್ದರು.