ಬೇಲೂರು: ಪಕ್ಷದಲ್ಲಿ ಒಗ್ಗಟ್ಟಿನ ಬಲವಿದ್ದು ಕಾರ್ಯಕರ್ತರ ಶ್ರಮದಿಂದ ಬೇಲೂರಿನಲ್ಲಿ ಅಧಿಕಾರ ಹಿಡಿಯಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ. ಶಿವರಾಂ ಹೇಳಿದರು.
ಕಾಂಗ್ರೆಸ್ ಶಕ್ತಿ ಪ್ರದರ್ಶನ ಹಾಗೂ ನಾಮಪತ್ರ ಸಲ್ಲಿಕೆ ವೇಳೆ ಬಸವೇಶ್ವರ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಿಂದ ಬೇಲೂರಿನಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿ ಇಬ್ಬಾಗವಾಗಿದೆ ಎಂದು ಮತದಾರರನ್ನು ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಇತರೆ ಪಕ್ಷದವರು ನಡೆಸುತ್ತಿದ್ದರು. ಆದರೆ ಈಗ ನಮ್ಮ ಕಾಂಗ್ರೆಸ್ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ. ಬಿಜೆಪಿ ದುರಾಡಳಿತದ ವಿರುದ್ಧ ಬೇಸತ್ತ ಜನ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ, ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಈ ಬಾರಿ ತಾಲೂಕಿನಲ್ಲಿ ಕಾಂಗ್ರೆಸ್ ಗೆಲ್ಲಿಸಲು ನಿಮ್ಮೆಲರ ಸಹಕಾರ ಅತಿ ಮುಖ್ಯ, ನಿಮ್ಮೆಲ್ಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಬೇಲೂರಿನಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲಿ ವ್ಯಕ್ತಿಗಿಂತ ನಮಗೆ ಪಕ್ಷವೇ ಮುಖ್ಯ. ನಾವೆಲ್ಲರೂ ಪಕ್ಷದ ಸಿದ್ದಾಂತದಡಿ ಕೆಲಸ ಮಾಡುತ್ತೇವೆ. ಈ ಬಾರಿ ಬಿ ಶಿವರಾಂ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಯಾರೇ ಆಕಾಂಕ್ಷಿಗಳಿದ್ದರೂ ಇಲ್ಲಿ ಒಬ್ಬರೇ ಶಾಸಕರಾಗಿ ನಿಲ್ಲಬೇಕಾಗಿರುವುದರಿಂದ ಬಿ. ಶಿವರಾಂ ಅವರು ನಿಂತಿದ್ದಾರೆ, ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಮುಖಂಡ ವೈ.ಎನ್ ಕೃಷ್ಣೇಗೌಡ ಮಾತನಾಡಿ, ಎರಡು ಬಾರಿ ನಾವು ಬೇಲೂರಿನಲ್ಲಿ ಅಧಿಕಾರ ಹಿಡಿದೆದ್ದೆವು, ಆದರೆ ಕೆಲವು ಗೊಂದಲಗಳಿಂದಾಗಿ ಜೆಡಿಎಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಜೆಡಿಎಸ್ ಹಾಗೂ ಬಿಜೆಪಿ ದೋರಣೆಯನ್ನು ಖಂಡಿಸಿ ಮತದಾರರು ಈ ಬಾರಿ ಕಾಂಗ್ರೆಸ್ ಗೆ ಮತಹಾಕುವ ಮೂಲಕ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ. ಈಗಾಗಲೇ ಪ್ರತೀ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದು, ನಮಗೆ ಯಾರೇ ಎದುರಾಳಿಯಾಗಿದ್ದರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಆದ್ಯತೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ನಾವೆಲ್ಲರೂ ಕಾಂಗ್ರೆಸ್ ಪಕ್ಷದ ಸೇವಕರು, ಅದರ ಅಡಿಯಲ್ಲಿ ನಾವು ಕೆಲಸ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಪುರಸಭಾ ಮಾಜಿ ಅಧ್ಯಕ್ಷ ಜಿ.ಶಾಂತ ಕುಮಾರ್, ಜಿ.ಪಂ.ಮಾಜಿ ಸದಸ್ಯೆ ಸೈಯದ್ ತೌಫೀಕ್, ಮುಖಂಡರಾದ ಎಂ.ಆರ್. ವೆಂಕಟೇಶ, ಜಮಾಲೂದೀನ್, ಧರ್ಮೇಗೌಡ, ತುಳಸೀದಾಸ, ಝುಬೇರ್, ಇಕ್ಬಾಲ್, ದಾನಿ, ಅಶೋಕ, ಅಬ್ದುಲ್ ಸಮದ್, ಇತರರು ಹಾಜರಿದ್ದರು.