ಹಾಸನ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಆರ್.ಎಸ್.ಎಸ್ ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಷರತ್ತು ಬದ್ಧ ಬೆಂಬಲ ನೀಡಲು ಕರ್ನಾಟಕ ರಾಜ್ಯದ ದಲಿತ ಸಂಘರ್ಷ ಐಕ್ಯ ಹೋರಾಟ ಚಲನ ಸಮಿತಿ ತೀರ್ಮಾನಿಸಿದೆ ಎಂದು ದಲಿತ ಮುಖಂಡ ಎನ್. ವೆಂಕಟೇಶ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಸಂವಿಧಾನಿಕ ದಾರಿಯಿಂದ ಸರ್ಕಾರ ರಚನೆ ಮಾಡಿದೆ. ನಂತರ ಉತ್ತರ ಭಾರತದ ಕೋಮುದ್ವೇಷವನ್ನು ಕರ್ನಾಟಕದಲ್ಲಿ ಬಿತ್ತಲು ಆರಂಭಿಸಿತು, ಧರ್ಮ-ಧರ್ಮಗಳ ನಡುವೆ ಜಾತಿ ಸಂಘರ್ಷ ಬಿರುಕು ಮೂಡಿಸಲಾಯಿತು, ಭ್ರಷ್ಟಾಚಾರ ಬಿಜೆಪಿ ಸರ್ಕಾರದಲ್ಲಿ ಹೆಚ್ಚು ಕಂಡು ಬಂದಿದ್ದು, ದೇಶ ಮತ್ತು ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ವಾಧಿಕಾರಿ ಜನವಿರೋಧಿ ಆಡಳಿತವನ್ನು ಕಿತ್ತೊಗೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮುಂದೆ ಆಯ್ಕೆಯಾಗುವ ಸರ್ಕಾರ ರಚಿಸಿದ ನಂತರ ಜನಪರ ಆಡಳಿತ ನೀಡುವುದರೊಂದಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಆಗ್ರಹಿಸುತ್ತೇವೆ, ಕಾಂಗ್ರೆಸ್ ಪಕ್ಷ ದಲಿತ ಸಂಘರ್ಷ ಸಮಿತಿ ಆಯ್ಕೆ ಮಾಡಿಕೊಂಡು ಈ ಹೊತ್ತಿನ ಅನಿವಾರ್ಯ ಚುನಾವಣೆ ಆಯ್ಕೆಯ ಹೊರತು ರಾಜಕೀಯ ಪರ್ಯಾಯವಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದರು.
ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಸಮಿತಿಯು ಕೆಲಸ ಮಾಡಲಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ನಮ್ಮ ಹದಿಮೂರು ಬೇಡಿಕೆಗಳ ಷರತ್ತನ್ನು ಅವರ ಮುಂದಿಡಲಾಗಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಗುರುಪ್ರಸಾದ್, ವಿ. ನಾಗರಾಜ, ಎಂ. ಸೋಮಶೇಖರ, ಜಿಗಣಿ ಶಂಕರ್ ರಾಜಶೇಖರ ಇದ್ದರು.