ಹಾಸನ: ರಾಜ್ಯದಲ್ಲಿ ಜನರು ಹಾಗೂ ದೇವೇಗೌಡರ ಆಶೀರ್ವಾದದಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಕಾಲ ಸನಿಹವಾಗಿದ್ದು, ಮೇ 18ರಂದು ಜನತಾ ದಳ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಿಸಿ ಹ್ಯಾಂಡ್ ಪೋಸ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಕುಮಾರಸ್ವಾಮಿ ಅವರು ಪಕ್ಷದ ಪರ ಪ್ರಚಾರ ಮಾಡಿದ್ದು, ಜಿಲ್ಲೆಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ನಾನು, ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ ಪ್ರವಾಸ ಮಾಡಲಿದ್ದೇವೆ ಎಂದರು.
ಗಂಡಸಿ ಸಂತೆ ಖಾಲಿಯಾಗಿದೆ, ಜೆಡಿಎಸ್ ನ ಸಂತೆ ಭರ್ತಿಯಾಗಿದ್ದು ಎಲ್ಲರೂ ಈ ಬಾರಿ ತೀರ್ಮಾನ ಮಾಡಿಕೊಂಡು ಬಂದಿದ್ದೀರಾ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಹೇಳಿದ ಅವರು ಮೋದಿ, ರಾಹುಲ್ ಗಾಂಧಿ ಯಾರೇ ಬಂದರೂ ಹಾಸನ ಜಿಲ್ಲೆ ಗಂಡು ಮೆಟ್ಟಿದ ಗೌಡರ ಜಿಲ್ಲೆಯಾಗಿದೆ. ಶಿವಲಿಂಗೇಗೌಡರಿಗೆ ಇಷ್ಟು ದಿನ ದೇವೇಗೌಡರು ಬೇಕಾಗಿತ್ತು. ಈಗ ಸೋನಿಯಾ ಗಾಂಧಿ ಮೇಲೆ ಆಸೆ ಆಗಿದೆ, ಈ ಊರಿನಲ್ಲಿ ಮೈದು ಆಯ್ತು ಮುಂದಿನ ಊರಿಗೆ ಮೇಯಲು ಹೋಗುತ್ತಿದ್ದಾರೆ ಎಂದು ಟೀಕಿಸಿದರು.
ಗೌಡರ ಮಕ್ಕಳು ಜಾತಿವಾದಿಗಳಲ್ಲ, ಬೀಜ ಬಿತ್ತುವ ಜನ ಎಂದು ಹೇಳಿದ ಅವರು ದೇವೇಗೌಡರು ಹಾಗೂ ಅವರ ಮಕ್ಕಳು ಲಿಂಗಾಯಿತರ ವಿರೋಧಿಗಳಲ್ಲ, ಹಾಸನ ಜಿಲ್ಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಲಿಂಗಾಯಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ನುಡಿದರು.
ದೇವೇಗೌಡರು, ಕುಮಾರಸ್ವಾಮಿ ಮುಖ ನೋಡಿದರೆ ವೋಟು ಹಾಕುವುದಿಲ್ಲ ಎಂದು ಹೇಳಿದ ಶಿವಲಿಂಗೇಗೌಡರು, 15 ವರ್ಷ ಯಾರ ಮುಖದಿಂದ ಗೆದ್ದರು ಹಾಗೂ ಶಾಸಕರಾದರು ಎಂದು ಪ್ರಶ್ನಿಸಿದ ಅವರು ಇಂದು ಸೋನಿಯಾ ಗಾಂಧಿ ಮುಖ ಚೆನ್ನಾಗಿದೆ ಎಂದು ಕಾಂಗ್ರೆಸ್ ಗೆ ಹೋಗಿದ್ದೀಯಾ ಎಂದು ಲೇವಡಿ ಮಾಡಿದರು.