ಹೊಳೆನರಸೀಪುರ: ಕರ್ನಾ ಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳ ನಡುವಿನ ಜಟಾಪಟಿ ಹೆಚ್ಚುತ್ತಿದೆ. ಇದೀಗ ದೇವಸ್ಥಾನದಲ್ಲಿ ಪ್ರಸಾದ ಹಂಚುವಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ನೂಕಾಟ, ತಳ್ಳಾಟ ನಡೆಯಿತು.
ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಾಜಿ ಸಚಿವರು ಆಗಿರುವ ಶಾಸಕ ಹೆಚ್.ಡಿ.ರೇವಣ್ಣ ಅವರ ಕಡೆಯಿಂದ ಪ್ರಸಾದ ವಿತರಣೆ ಮಾಡಲು ಕಾರ್ಯಕರ್ತರು ಮುಂದಾದರು. ಈ ವೇಳೆ ನಮಗೂ ಪ್ರಸಾದ ವಿತರಣೆಗೆ ಅವಕಾಶ ನೀಡಿ ಅಂತಾ ಕಾಂಗ್ರೆಸ್ಸಿಗರು ಪಟ್ಟು ಹಿಡಿಯಲಾರಂಭಿಸಿ ಧರಣಿ ಕುಳಿತರು. ಈ ವಿಚಾರ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದರು.
ಜೆಡಿಎಸ್ ಕಾರ್ಯಕರ್ತರು ಪ್ರಸಾದ ವಿತರಣೆಗೆ ನಿಂತಾಗ ನಮಗೂ ಪ್ರಸಾದ ವಿನಿಯೋಗ ಮಾಡಲು ಅವಕಾಶ ನೀಡಿ ಎಂದು ಪಾತ್ರೆ ಹಾಗೂ ಶಾಮಿಯಾನದೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದಾರೆ. ಈ ವೇಳೆ ವಾಹನ ತಡೆದ ಪೊಲೀಸರ ವಿರುದ್ದ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಕ್ರಮದಿಂದ ಕೆರಳಿ ದೇವಾಲಯದ ದ್ವಾರದ ಎದುರು ನೂರಾರು ಮಂದಿ ಧರಣಿಗೆ ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಹೊಡೆದು ಓಡಿಸಿದರು.
ಹೀಗೆ ಆರಂಭವಾದ ಕಾಂಗ್ರೆಸ್ ಕಾರ್ಯಕರ್ತರ ಧರಣಿ ವಿಚಾರ ತಿಳಿದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಬಳಿಕ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಆರಂಭವಾದ ವಾಗ್ವಾದ ತಾರಕಕ್ಕೇರಿ ಪರಸ್ಪರ ನೂಕಾಟ ತಳ್ಳಾಟ ಆರಂಭವಾಯಿತು. ಇದರಿಂದಾಗಿ ದೇವಸ್ಥಾನದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ಈ ವೇಳೆ ಜಟಾಪಟಿ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಇನ್ನು, ದೇವಸ್ಥಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಬಗ್ಗೆ ವಿಚಾರ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದು, ಪಕ್ಷದ ಹೆಸರಿನಲ್ಲಿ ದೇಗುಲ ಆವರಣದಲ್ಲಿ ಪ್ರಸಾದ ವಿತರಣೆಗೆ ಅವಕಾಶ ಇಲ್ಲವೆಂದು ಸ್ಪಷ್ಟನೆ ನೀಡಿದರು. ಈವೆರೆಗೆ ಯಾವುದೇ ಪಕ್ಷದ ಹೆಸರನಲ್ಲಿ ಪ್ರಸಾದ ವಿನಿಯೋಗ ನಡೆದಿಲ್ಲ. ಈ ವರ್ಷವೂ ವ್ಯಕ್ತಿ ಅಥವಾ ಪಕ್ಷದ ಹೆಸರಿನಲ್ಲಿ ಅನ್ನ ಸಂತರ್ಪಣೆ ಆಗಲ್ಲ. ಮುಜರಾಯಿ ಇಲಾಖೆಗೆ ಯಾರು ಬೇಕಾದರೂ ದಾನ ಕೊಡಬಹುದು. ದಾನಿಗಳು ದಿನಸಿ ಕೊಟ್ಟರೆ ಅನ್ನಸಂತರ್ಪಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು. ಈ ವೇಳೆ ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್, ಪುಟ್ಟರಾಜು, ವಕೀಲರಾದ ಹರೀಶ್ ಸುನಿಲ್ ಕುಮಾರ್, ಬಾಗೇವಾಳು ಮಂಜೇಗೌಡ, ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.
ದೇವರ ವಿಚಾರದಲ್ಲಿ ರಾಜಕೀಯ ಬೇಡ: ಪ್ರಜ್ವಲ್ ರೇವಣ್ಣ
ಕಾರ್ಯಕರ್ತರ ಗಲಾಟೆ ಬಗ್ಗೆ ದೇವಾಲಯದ ಸಮೀಪ ಪ್ರತಿಕ್ರಿಸಿದ ಸಂಸದ ಪ್ರಜ್ವಲ್ ರೇವಣ್ಣ, ಮೊದಲಿನಿಂದ ಜಾತ್ರೆ ಹೇಗೆ ನಡೆದುಕೊಂಡು ಬರುತ್ತಿದೆಯೋ ಹಾಗೇ ನಡೆಯುತ್ತದೆ. ಯಾರು ಕೂಡ ದೇವರ ಕಾರ್ಯ ಹಾಳು ಮಾಡುವ ಕೆಲಸ ಮಾಡಬಾರದು. ಅವರೂ (ಕಾಂಗ್ರೆಸ್) ಬಂದು ಪೂಜೆ ಮಾಡಲಿ ನಾವೇನು ಬೇಡ ಎನ್ನಲ್ಲ. ಪ್ರಸಾದವನ್ನು ಒಳಗೆ ಬಿಡಲ್ಲ, ಹೂ ಒಳಗಡೆ ಬಿಡಲ್ಲ ಅಂದರೆ ಹೇಗೆ? ಇದರಿಂದ ನನಗೇನು ಆಗಲ್ಲ ಅವರಿಗೆ ತೊಂದರೆ. ದೇವರ ಕಾರ್ಯದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು.
ರಾಜಕಾರಣ ಮಾಡುವ ಕಡೆ ಮಾಡಲಿ ನಾನೇನು ಬೇಡಾ ಅನ್ನಲ್ಲ. ಈಗ ಅವರು ಸ್ಟೇಜ್ ಹಾಕಿಕೊಂಡು ಕಾರ್ಯಕ್ರಮ ಮಾಡಿದರು. ಒಂದು ಸಾವಿರ ಜನ ಸೇರಿಸಿ ದೊಡ್ಡ ಸಮಾವೇಶ ಅಂತ ಬಿಂಬಿಸಿಕೊಂಡರು. ಅದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಲ್ಲ. ಆದರೆ ದೇವರ ಕಾರ್ಯದ ಸಂದರ್ಭದಲ್ಲಿ ಗಲಾಟೆ ಆಗುವುದು ಬೇಡ. ಇದು ಊರಿನ ಜಾತ್ರೆ ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ. ದೇವರ ಕಾರ್ಯದಲ್ಲಿ ಮೊದಲಿನಿಂದ ಹೇಗೆ ನಡೆಯುತ್ತಿದೆ ಹಾಗೇ ನಡೆಯಲಿ ಎಂದರು.
ನಾವು ಇಲ್ಲಿ ಪ್ರಸಾದ ಕೊಡುತ್ತಾ ಇಲ್ಲಾ, ನಾವು ದಾನ ಎಂದು ಕೊಡುತ್ತಾ ಇದ್ದೇವೆ. ಅದನ್ನ ದೇವಾಲಯ ಸಮಿತಿಯವರು ಪಡೆದು ಅವರೇ ಪ್ರಸಾದ ಕೊಡುತ್ತಾರೆ. ಅವರು ಸ್ವಯಂ ಸೇವಕರನ್ನು ಇಟ್ಟುಕೊಂಡು ಪ್ರಸಾದ ಹಂಚಿಸುತ್ತಾರೆ. ನಾವು ಸ್ವ-ಇಚ್ಚೆಯಿಂದ ತರಕಾರಿ, ದಿನಸಿ ದಾನ ಕೊಡುತ್ತೇವೆ. ಹೀಗೆ ದಾನ ಕೊಡುವುದಾದರೆ ಅವರೂ ಕೊಡಲಿ. ಹಾಗಂತಾ ಪ್ರತ್ಯೇಕ ಕೌಂಟರ್ ಕೊಡಿ ಅಂದರೆ ಕೊಡಲು ಆಗಲ್ಲ. ಈ ಜಾತ್ರೆ ತಹಶೀಲ್ದಾರ್ ನೇತೃತ್ವದಲ್ಲಿ ನಡೆಯುತ್ತದೆ. ಅವರು ಯಾವ ತೀರ್ಮಾನ ಮಾಡುತ್ತಾರೋ ಅದರಂತೆ ನಡೆಯೋಣ ಎಂದರು.