ಬೇಲೂರು: ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನ ನೀಡಿದ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿಯನ್ನು ಸ್ವಾಭಿಮಾನಿ ದಲಿತರು ಮರೆತಿಲ್ಲ, ಈ ಕಾರಣದಿಂದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಶತಸಿದ್ದವಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಗಂಗಾಧರ ಬಹುಜನ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಜಾ ಪ್ರಭುತ್ವಕ್ಕೆ ಗಟ್ಟಿತನ ನೀಡಿದ ಸಂವಿಧಾನವನ್ನು 90 ಕ್ಕೂ ಹೆಚ್ಚು ತಿದ್ದುಪಡಿ ನಡೆಸಿ ಅಂಬೇಡ್ಕರ್ ಆಶಯಕ್ಕೆ ದ್ರೋಹ ಬಗೆದ ಕಾಂಗ್ರೆಸ್ ಪಕ್ಷ ಇಡೀ 65 ವರ್ಷದ ಆಳ್ವಿಕೆಯಲ್ಲಿ ದಲಿತರನ್ನು ಓಟು ಬ್ಯಾಂಕ್ ಮಾಡಿಕೊಂಡು ರಾಜಕಾರಣ ನಡೆಸುತ್ತಿದೆ. ಕಾಂಗ್ರೆಸ್ ದೇಶದಲ್ಲಿ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ. ಅಲ್ಲದೇ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಭೀತಿಯಿಂದ ಬಿಎಸ್‌ಪಿ ಪಕ್ಷದ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಸತತ 22 ವರ್ಷದಿಂದ ಸಕ್ರಿಯ ರಾಜಕಾರಣ ನಡೆಸುತ್ತಾ ಬಡವರು, ನಿರ್ಗತಿಕರ ಪರ ಹೋರಾಟ ನಡೆಸುತ್ತಾ ಬಂದಿದ್ದು, ಯಾರದೋ ಬೂಟು ನೆಕ್ಕಿಕೊಂಡು ರಾಜಕಾರಣ ಮಾಡಲು ಬಂದಿಲ್ಲ, ವಿಶ್ವ ಪ್ರಸಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕನಸು ಹೊತ್ತುಕೊಂಡು ಬೇಲೂರಿನಲ್ಲಿ ಸ್ವತಂತ್ರ ಬಂದ ದಿನದಿಂದ ರಾಜಕಾರಣ ಮಾಡುತ್ತಾ ಬಂದಿರುವ ಬಗ್ಗೆ ತಿಳಿಸಿದ ಅವರು ಸ್ವತಃ ಬೇಲೂರು ಕ್ಷೇತ್ರದ ಹಾಲಿ ಶಾಸಕರಾದ ಕೆ.ಎಸ್.ಲಿಂಗೇಶರವರೇ ಗಂಗಾಧರ ಬಹುಜನ ಅವರಿಗೆ ಒಂದು ಅವಕಾಶ ನೀಡಿ ಎಂದು ಹೇಳಿದ್ದಾರೆ. ಸದ್ಯ ಬೇಲೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಹೊರಗಿವನರು ಸ್ಪರ್ಧೆಗೆ ಇಳಿದಿದ್ದು, ಕ್ಷೇತ್ರದ ಸ್ವಾಭಿಮಾನಿಗಳು ಯಾವ ಕಾರಣಕ್ಕೂ ಹೊರಗಿನವರಿಗೆ ಮತ ನೀಡಬಾರದು ಎಂದು ಮನವಿ ಮಾಡಿದರು.
ರಾಜ್ಯದ 170 ಕ್ಷೇತ್ರದಲ್ಲಿ ಬಿಎಸ್ಪಿ ಕಣಕ್ಕೆ ಇಳಿದಿದೆ. ಜನತೆ ಜೆಸಿಬಿ ಪಕ್ಷಗಳ ಆಡಳಿತದಿಂದ ಬೇಸತ್ತು 2023ರಲ್ಲಿ ಬಿಎಸ್‌ಪಿ ಪಕ್ಷಕ್ಕೆ ಬೆಂಬಲ ನೀಡುತ್ತಾರೆ. ಹಾಗೆಯೇ ವಿಶ್ವ ಪ್ರಸಿದ್ದ ಬೇಲೂರಿನ ಸಮಸ್ಯೆಗಳಾದ ಬಗರ್‌ಹುಕ್ಕಂ ಅರ್ಜಿ ವಿಲೇವಾರಿ, ಯುವಕರಿಗೆ ಉದ್ಯೋಗ ಅವಕಾಶ, ಮಹಿಳೆಯರಿಗೆ ಸಮಾನ ಮೀಸಲಾತಿ, ಪ್ರತ್ಯೇಕ ಸ್ಮಶಾನಗಳು, ಎಲ್ಲಾ ವರ್ಗಕ್ಕೆ ಮೀಸಲಾತಿ ಹಾಗೂ ಕ್ಷೇತ್ರದಲ್ಲಿ ಸಮಗ್ರ ನೀರಾವರಿ, ಅರೆಕಾಲಿನ ನೌಕರರ ಖಾಯಂ, ಕಾಯಕರ ಸಮಾಜಕ್ಕೆ ಉತ್ತೇಜನ ಅರ್ಥಿಕ ನೆರವು, ಉಚಿತ ಶಿಕ್ಷಣ ಮತ್ತು ಆರೋಗ್ಯ, ದಿವ್ಯಾಂಗರಿಗೆ ಮತ್ತು ವಯೋವೃದ್ಧರಿಗೆ ಮಾಶಾಸನ ಏರಿಕೆ, ಪ್ರವಾಸೋದ್ಯಮ ಬಲವರ್ಧನೆ ಹೀಗೆ ಹತ್ತಾರು ಭರವಸೆಗಳ ಮೂಲಕ ಕ್ಷೇತ್ರದಲ್ಲಿ ಬಿಎಸ್‌ಪಿ ಪಕ್ಷದಿಂದ ಚುನಾವಣೆ ಕಣಕ್ಕೆ ಇಳಿದ ನನಗೆ ನಿಮ್ಮೆಲ್ಲರ ಬೆಂಬಲ ನೀಡಬೇಕಿದೆ. ಈಗಾಗಲೇ ಕ್ಷೇತ್ರದಲ್ಲಿ ಮತದಾರರಿಗೆ ಆಸೆ-ಆಮಿಷಗಳ ಜೊತೆ ಊಡುಗರೆ ನೀಡುವ ಕೆಲಸ ನಡೆಯುತ್ತಿದೆ. ಇಂತಹವರ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣು ಇಡಬೇಕಿದೆ. ನ್ಯಾಯ ಸಮ್ಮತ ಮತ್ತು ಪ್ರಾಮಾಣಿಕತೆಯ ಚುನಾವಣೆಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಮಗೆ ನಿಮ್ಮ ಬೆಂಬಲ ಅಗತ್ಯವೆಂದರು.
ಪತ್ರಿಕಾಗೋಷ್ಟಿಯಲ್ಲಿ ಬಿಎಸ್‌ಪಿ ಪದಾಧಿಕಾರಿಗಳಾದ ಪ್ರಕಾಶ ಕೆಸಗೋಡು, ರಾಜು ಬೆಳ್ಳಟ್ಟೆ, ದ್ಯಾಪಣ್ಣ, ಮಂಜುನಾಥ, ರಾಜೇಶ್ ಹಾಜರಿದ್ದರು.