ಸಕಲೇಶಪುರ: ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ ಸೇರಿ ಅನೇಕ ಕೇಂದ್ರದ ನಾಯಕರ ಪ್ರವಾಸದಿಂದ ಬಿಜೆಪಿಗೆ ಇನ್ನೂ ಹೆಚ್ಚು ಶಕ್ತಿ ಬಂದಿದೆ. ಇವೆಲ್ಲದರ ಲಾಭ ಬಿಜೆಪಿಗೆ ಆಗುತ್ತದೆ. ನಿಶ್ಚಿತವಾಗಿ ಸರ್ಕಾರ ರಚನೆ ಮಾಡುತ್ತೇವೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸದಿಂದ ನುಡಿದರು.
ಸಕಲೇಶಪುರದಲ್ಲಿ ರೋಡ್ ಶೋ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸುಮಾರು 80 ಕ್ಷೇತ್ರಕ್ಕೂ ಹೆಚ್ಚು ಕಡೆ ಹೋಗಿ ಬಂದಿದ್ದೇನೆ. ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ತುಂಬಾ ಚೆನ್ನಾಗಿದೆ. ಈ ಬಾರಿ ನಾವು ಕನಿಷ್ಠ 130 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ನೂರಕ್ಕೆ ನೂರು ನಿಶ್ಚಿತ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು.
ಯಾರ ಹಂಗಿಲ್ಲದೇ, ಯಾರ ಬೆಂಬಲವಿಲ್ಲದೇ ಸ್ವತಂತ್ರವಾಗಿ ನಾವು ಸರ್ಕಾರ ರಚನೆ ಮಾಡಲಿದ್ದೇವೆ. ಬಿಜೆಪಿಯಂತು ಸ್ಪಷ್ಟ ಬಹುಮತದ ಸರ್ಕಾರ ಮಾಡಿ ಉತ್ತಮ ಆಡಳಿತ ನೀಡಲಿದೆ ಎಂದು ತಿಳಿಸಿದರು. ಹಾಸನದಲ್ಲಿ ಪ್ರೀತಂ ಗೌಡ ವಿರುದ್ಧ ದೇವೇಗೌಡರ ಪ್ರಚಾರ ವಿಚಾರದ ಕುರಿತು ಮಾತನಾಡಿದ ಅವರು, ಯಾರೇ, ಎಲ್ಲಿ, ಏನೇ ಓಡಾಡಿದರೂ ಪ್ರೀತಂ ಗೌಡ ಮೂವತ್ತೈದರಿಂದ, ನಲವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಯಾರು ಬೇಕಾದರೂ ಹೋಗಲಿ, ಪ್ರಚಾರ ಮಾಡಲಿ, ವೈಯುಕ್ತಿಕ ದ್ವೇಷದಿಂದ ಬೇರೆಯವರು ಮಾತನಾಡುತ್ತಿದ್ದಾರೆ, ಅದರಿಂದ ಏನು ತೊಂದರೆ ಆಗಲ್ಲ. ಪ್ರೀತಂ ಗೌಡ ನೂರಕ್ಕೆ ನೂರು ಬಹಳ ದೊಡ್ಡ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಎಂದು ತಿಳಿಸಿದರು. ಬಿಜೆಪಿ ಭ್ರಷ್ಟ ದರ ಪಟ್ಟಿ ಎಂದು ಕಾಂಗ್ರೆಸ್ ಜಾಹೀರಾತು ವಿಚಾರ ಕುರಿತಂತೆ ಮಾತನಾಡಿ, ಅದನ್ನು ನೋಡುತ್ತಿದ್ದೇವೆ. ಅಡ್ವಕೇಟ್ ಕನ್ಸಲ್ಟ್ ಮಾಡಿ ಮಾನನಷ್ಟ ಮೊಕದ್ದಮೆ ಹಾಕಲು ಆಗುವುದಾದರೆ ಅದನ್ನು ಹಾಕಲು ಪ್ರಯತ್ನ ಮಾಡುವೆ ಎಂದರು. ಸೀನಿಯರ್ ಅಡ್ವಕೇಟ್ ಜೊತೆ ಸಮಾಲೋಚಿಸಿ, ಸೂಕ್ತ ತೀರ್ಮಾನ ಮಾಡುವೆ ಎಂದರು. ಕಾಂಗ್ರೆಸ್‌ಗೆ ಬಹುಮತ ಬರುತ್ತೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಬಹುಮತ ಬರುತ್ತೆ ಅಂತ ಹೇಳಿಕೊಳ್ಳಲಿ ಯಾರು ಬೇಡ ಅಂತಾರೆ ಎಂದು ವ್ಯಂಗ್ಯವಾಗಿ ನುಡಿದರು.