ಹಾಸನ: ಆಮ್ ಆದ್ಮಿ ಪಕ್ಷದ ಪೊರಕೆಯೆ ಪರಿಹಾರ ಎಂಬ ಅಭಿಯಾನದ ಅಡಿಯಲ್ಲಿ ಇಂದು ನಗರದ ಕುವೆಂಪು ನಗರ, ಶಂಕರ ಮಠ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಪ್ರಚಾರ ನಡೆಯಿತು.
ನಗರದ ವಿವಿಧ ಬಡಾವಣೆಯ ಮತದಾರರಿಗೆ ಪೊರಕೆ ವಿತರಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಜೆಸಿಬಿ ಪಕ್ಷಗಳನ್ನು ಗುಡಿಸಲು ಪೊರಕೆಯಿಂದ ಮಾತ್ರ ಸಾಧ್ಯ, ಆದುದರಿಂದ ಪೊರಕೆ ಉಪಯೋಗಿಸಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳನ್ನು ಗುಡಿಸಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ರಾಜ್ಯ ರಾಜಕೀಯದಲ್ಲಿ ಕಮಲ ಬಾಡಿದೆ, ತೆನೆ ಉದುರಿದೆ, ಕೈ ಕೊಳೆತಿದೆ ಎನ್ನುವ ಮೂಲಕ ಮೂರು ಪಕ್ಷಗಳ ಬಗ್ಗೆ ವ್ಯಂಗ್ಯವಾಡಿದ ಅವರು ಪೊರಕೆಯಿಂದ ಮಾತ್ರ ದೇಶದ ಭ್ರಷ್ಟಾಚಾರ ಗುಡಿಸಲು ಸಾಧ್ಯ ಎಂಬುದನ್ನು ಜನರಲ್ಲಿ ಅರಿವು ಮೂಡಿಸಿ ಪೊರಕೆ ಗುರುತಿನ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಂಕ ಮಂಜು, ಅಬೀಬ್, ಸುಂದರೇಶ್, ರೆಹಮತ್, ರಂಗಸ್ವಾಮಿ, ನಜೀರ್, ಜ್ಯೋತಿ ಇತರರು ಇದ್ದರು.