ಬೇಲೂರು: ಬೇಲೂರು ತಾಲೂಕು ಬಿಜೆಪಿಯಲ್ಲಿ ಯುವ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವುದರಿಂದ ಬೇಸತ್ತು ಜಾತ್ಯತೀತ ಜನತಾ ದಳವನ್ನು ಸೇರುತ್ತಿರುವುದಾಗಿ ಬಿಜೆಪಿ ಕಾರ್ಯಕರ್ತ ನಾಗೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಭಾರತೀಯ ಜನತಾ ಪಕ್ಷದಲ್ಲಿ ಯುವ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಅದರಲ್ಲೂ ತಾಲೂಕು ಘಟಕದಲ್ಲಿ ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ನಮ್ಮ ಮಾತಿಗೆ ಯಾವುದೇ ಬೆಲೆ ಇಲ್ಲ. ಪಕ್ಷದ ಏಳಿಗೆ ಹಾಗೂ ಸಂಘಟನೆಗೆ ನಾವು ಕೊಡುವ ಸಲಹೆ, ಸೂಚನೆಯನ್ನು ಸ್ವೀಕರಿಸುತ್ತಿಲ್ಲ, ಪಕ್ಷದ ಹಿತಾದೃಷ್ಟಿಯ ನಿಟ್ಟಿನಲ್ಲಿ ಇಷ್ಟು ದಿನ ಸುಮ್ಮನಿದ್ದೆವು, ಆದರೆ ಈಗ ಪರಿಸ್ಥಿತಿ ಕೈ ಮೀರಿದ್ದು ತಾವುಗಳು ಬಿಜೆಪಿ, ಭಜರಂಗದಳ ಹಾಗೂ ಶ್ರೀರಾಮ ಸೇನೆ ಸಂಘಟನೆಯನ್ನು ತೊರೆಯುತ್ತಿರುವುದಾಗಿ ತಿಳಿಸಿದರು.
ಈಗಾಗಲೇ ಎರಡು ಪಕ್ಷದಲ್ಲೂ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ. ಸ್ಥಳೀಯರಿಗೆ ಟಿಕೆಟ್ ನೀಡಿದರೆ ತಾಲೂಕಿನ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಅರಿವು ಇರುತ್ತದೆ. ಸಮಸ್ಯೆಗಳಿದ್ದಾಗ ಸ್ಥಳೀಯರಾದರೆ ಕೂಡಲೇ ಸಂಪರ್ಕಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಕೆಎಸ್ ಲಿಂಗೇಶ್ ರವರನ್ನು ತಾವು ಈ ಬಾರಿ ಬೆಂಬಲಿಸಲು ಜೆಡಿಎಸ್ ಪಕ್ಷಕ್ಕೆ ಸೇರುತ್ತಿದ್ದೇವೆ. ತಾಲೂಕಿನಾದ್ಯಂತ ಯುವಕರನ್ನು ಸಂಘಟನೆ ಮಾಡಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ. ಈಗಾಗಲೇ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೆ ಸಿದ್ದರಾಗಿದ್ದು, ಬಿಜೆಪಿಯಿಂದ ಯಾವುದೇ ಒತ್ತಡ ಬಂದರು ನಾವು ಮಣಿಯುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಘು, ಅರುಣ, ಲೋಕೇಶ, ಭರತ್ ಕುಮಾರ್, ನವೀನ ಇದ್ದರು.