ಹಾಸನ: ತ್ರಿಪುರ ಮತ್ತು ನಾಗಲ್ಯಾಂಡ್ ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸರಕಾರ ರಚನೆಗೆ ಸಿದ್ಧತೆಯಲ್ಲಿರುವ ಹಿನ್ನಲೆಯಲ್ಲಿ ಹಾಸನ ನಗರದ ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆ ಮುಂಭಾಗ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಜೈಕಾರ ಹಾಕುವುದರ ಮೂಲಕ ಸಂಭ್ರಮಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಯವನ್ನು ಗಳಿಸಿದೆ. ತ್ರಿಪುರ, ನಾಗಲ್ಯಾಂಡ್ ಭಾಗಗಳಲ್ಲಿ ಬಹುಮತ ನೀಡಿದ್ದು, ಈಗ ಬಿಜೆಪಿ ಸರಕಾರವನ್ನು ರಚನೆ ಮಾಡಲು ಅವಕಾಶ ದೊರಕಿದೆ. ಈ ಸಂಭ್ರಮದ ಕ್ಷಣಗಳನ್ನು ಹಂಚಿಕೊಳ್ಳಲು ಬಿಜೆಪಿ ಪಕ್ಷದ ಹಾಸನ ನಗರ ಮತ್ತು ಗ್ರಾಮಾಂತರ ಮಂಡಲದ ಕಾರ್ಯಕರ್ತರು ಎಂ.ಜಿ. ರಸ್ತೆ ಗಾಂಧೀಜಿ ಪ್ರತಿಮೆ ಬಳಿ ವಿಜಯೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇವೆ ಎಂದರು.
ಈ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜ್ಯದ ಮುಂಬರುವಂತಹ ವಿಧಾನಸಭೆ ಚುನಾವಣೆಯ ದಿಕ್ಸೂಜಿ ಎಂದರೆ ತಪ್ಪಾಗಲಾರದು. ಹಾಸನ ವಿಧಾನಸಭಾ ಕ್ಷೇತ್ರದಲ್ಲಿಯೂ, ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡರು ಮತ್ತೆ ಗೆಲುವನ್ನು ಪಡೆಯುವ ವಿಶ್ವಾಸ ನಮಗೆಲ್ಲಾ ಇದೆ ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ರಂಗನಾಥ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರತ್ನ ಪ್ರಕಾಶ, ಪ್ರೀತಿವರ್ಧನ, ರಾಹುಲ ಕಿಣಿ, ಮುರುಳಿ, ದರ್ಶನ, ಗೋಪಿ, ರಾಜೇಶ ಸತ್ಯಮಂಗಲ ಇತರರು ಉಪಸ್ಥಿತರಿದ್ದರು.