ಹಾಸನ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಿದ್ದು, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ. ಇದಕ್ಕಾಗಿ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ರೋಡ್ ಶೋ ನಡೆಸುವ ಮೂಲಕ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಗೃಹ ಸಚಿವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸ್ವತಹ ಪ್ರಧಾನ ಮಂತ್ರಿಗಳೇ ಅಖಾಡಕ್ಕೆ ಇಳಿದಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದ ಪ್ರೀತಂ ಜೆ ಗೌಡ ಅವರ ಪರ ಪ್ರಚಾರ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದ ನಾಳೆ ಹಾಸನಕ್ಕೆ ಆಗಮಿಸುತ್ತಿದ್ದು, ಬೃಹತ್ ರೋಡ್ ಶೋ ನಡೆಸಲಿದ್ದಾರೆ ಹಾಗೂ ಏಪ್ರಿಲ್ 30 ರಂದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಪರ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರೇ ಆಗಮಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಬೇಲೂರಿನ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿ ಸುರೇಶ್ ಪರ ಮತಯಾಚನೆ ಮಾಡಲಿದ್ದಾರೆ. ನಿನ್ನೆ ಸಹ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ 10,000 ಸಾರ್ವಜನಿಕರ ಎದುರು ರೋಡ್ ಶೋ ನಡೆಸಿದ್ದು, ಬಿಜೆಪಿ ಹಾಸನ ಜಿಲ್ಲೆಯಲ್ಲಿ ಈ ಬಾರಿ ಕನಿಷ್ಠ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿದೆ.
ರಾಜ್ಯ ರಾಷ್ಟ್ರೀಯ ಪ್ರಮುಖ ನಾಯಕರು ಸಹ ಜಿಲ್ಲೆಯಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದು, ಇಂದು ಸಿಟಿ ರವಿ ಅವರು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ನಾಳೆಯೂ ಸಹ ಪ್ರಚಾರ ಮುಂದುವರೆಯಲಿದ್ದು, ಬಿವೈ ರಾಘವೇಂದ್ರ ಹಾಗೂ ಅಂಗಾರ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು ಪ್ರಚಾರ ನಡೆಸಲಿದ್ದಾರೆ.
ಏ.23 ರಂದು ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಜಿವಿಟಿ ಬಸವರಾಜ ಪರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದ್ದು, ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಬಸವರಾಜ ಗೆಲುವಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ವಿಧಾನಸಭೆ ಚುನಾವಣಾ ಕಣ ದಿನೇದಿನೇ ರಂಗೇರುತ್ತಿದ್ದು, ಮತದಾನಕ್ಕೆ ಇನ್ನು ಕೇವಲ 15 ದಿನ ಬಾಕಿ ಇರುವಾಗ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಜಿಲ್ಲೆಯತ್ತ ಮುಖ ಮಾಡಿದ್ದು, ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ.
ಜಿಲ್ಲೆಯ ಮಟ್ಟಿಗೆ ಬಿಜೆಪಿ ಹೊರತಾಗಿ ಇತರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಯಾವುದೇ ಪ್ರಮುಖ ನಾಯಕರನ್ನು ಕರೆತರದೆ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್ ಡಿ ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎರಡು ಮೂರು ಬಾರಿ ಜಿಲ್ಲೆಗೆ ಭೇಟಿ ನೀಡಿರುವುದನ್ನು ಬಿಟ್ಟರೆ ಉಳಿದಂತೆ ಅಭ್ಯರ್ಥಿಗಳೇ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೂ ಅಭ್ಯರ್ಥಿಗಳ ಪರ ಮತಯಾಚನೆಗೆ ಇದುವರೆಗೆ ಪ್ರಮುಖ ನಾಯಕರು ಆಗಮಿಸದೆ ಇರುವುದು ಕಂಡು ಬಂದಿದೆ.
ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮಾಡುವ ನೆಪದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಕರೆತರುತ್ತಿರುವುದು ಒಂದೆಡೆಯಾದರೆ, ರ್‍ಯಾಲಿಯಲ್ಲಿ ಭಾಗವಹಿಸಿದ ಜನರ ಮತಗಳು ಆಯಾ ಪಕ್ಷಗಳಿಗೆ ಬೀಳಲಿದೆಯೇ ಎಂಬ ವಾದವೂ ಇದೆ. ಎಲ್ಲಾ ರಾಜಕೀಯ ಪಕ್ಷಗಳು ಕೇವಲ ರ್‍ಯಾಲಿಗಳನ್ನು ಆಯೋಜನೆ ಮಾಡುವುದರ ಜೊತೆಗೆ ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸಬೇಕಿದೆ. ಕೇವಲ ರೋಡ್ ಶೋ ಮಾಡಿ ಕೋಟ್ಯಾಂತರ ರೂ. ವ್ಯಯಿಸಿದರೆ ಮತದಾರರ ಕೃಪೆ ಅಸಾಧ್ಯ ಎನ್ನುವ ರಾಜಕೀಯ ಲೆಕ್ಕಾಚಾರವನ್ನು ಪರಿಗಣಿಸಬೇಕಿದೆ. ಈಗಾಗಲೇ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು 2ರಿಂದ 3 ಬಾರಿ ಆಯಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಿದ್ದು, ಇದರಲ್ಲಿ ಎಷ್ಟು ಮತಗಳು ಯಂತ್ರದಲ್ಲಿ ದಾಖಲಾಗಲಿದೆ ಎಂಬುದು ಚುನಾವಣೆ ನಂತರವಷ್ಟೇ ತಿಳಿಯಲಿದೆ.