ಬೇಲೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದೆನಾದರೂ ಸಮಾಜಸೇವೆಯ ಕಾರ್ಯವನ್ನು ಮಾತ್ರ ನಿಲ್ಲಿಸಲಿಲ್ಲ ಎನ್ನುವ ಸತ್ಯ ನಿಮಗೆಲ್ಲರಿಗೂ ತಿಳಿದೇ ಇದೆ. ಅಧಿಕಾರವಿಲ್ಲದಿದ್ದರೂ ಸಮಾಜ ಸೇವೆಯನ್ನು ಮಾಡಿರುವ ಫಲವಾಗಿ ನೀವೆಲ್ಲರೂ ಇಂದು ನನ್ನ ಬೆನ್ನೆಲುಬಾಗಿ, ಪ್ರೀತಿಯಿಂದ ಮತವನ್ನು ನೀಡುತ್ತಿರಿ ಎನ್ನುವ ನಂಬಿಕೆ ನನ್ನಲ್ಲಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
ಭರ್ಜರಿ ಪ್ರಚಾರದಲ್ಲಿ ತೊಡಗಿದ ಅವರು, ಕೊಮ್ಮನಹಳ್ಳಿಯಲ್ಲಿ ಮಾತನಾಡಿ, ಬೇಲೂರು ವಿಧಾನ ಸಭಾ ಕ್ಷೇತ್ರವು ಹಲವು ಪಕ್ಷಗಳ ಆಡಳಿತವನ್ನು ಇದಾಗಲೇ ನೋಡಿದೆ. ಅಭಿವೃದ್ಧಿ ಎಷ್ಟಾಗಿದೆಯೆಂದು ಯಾರಾದರೂ ಕೇಳಿದರೆ ಅದಕ್ಕೆ ನೀವೇ ಸಾಕ್ಷಿಯಾಗಿದ್ದೀರಿ. ಈ ಬಾರಿ ಬಿಜೆಪಿಯ ಪ್ರಣಾಳಿಕೆಯನ್ನೂ ನೀವು ನೋಡಿದ್ದೀರಿ. ಇಲ್ಲಿ ಯಾವುದೇ ಜಾತಿ ಧರ್ಮದ ಗೋಡೆಯಿಲ್ಲದೆಯೇ ಕೆಲಸ ಮಾಡುವ ಕಾರ್ಯವನ್ನು ಬಿಜೆಪಿ ಮಾಡಿದೆ ಮತ್ತು ಮುಂದಿನ ದಿನಗಳಲ್ಲೂ ಮಾಡಲಿದೆ.
ಬೇಲೂರಿನ ಅಭಿವೃದ್ಧಿಯೆಂದರೆ ಅದು ಕೇವಲ ಎರಡು-ಮೂರು ಕೆಲಸಗಳಲ್ಲ. ಬೇಲೂರಿನ ಸಮಗ್ರ ಅಭಿವೃದ್ಧಿಯ ಕನಸನ್ನು ಹೊಂದಿರುವ ನಾನು ಐದು ವರ್ಷಗಳ ಕಾಲ ನಿಮ್ಮ ಸೇವಕನಾಗಿ, ವಿಧೇಯತೆಯಿಂದ ಸೇವೆ ಮಾಡುತ್ತೇನೆ. ಕೊರೋನಾ ಸಂದರ್ಭದಲ್ಲಿ ಕಷ್ಟದಲ್ಲಿರುವವರು ಯಾರೇ ಬಂದರೂ ಅವರ ಜಾತಿ ಧರ್ಮವನ್ನು ನೋಡದೆ, ಹಿರಿಯರಿಗೆ ಮಗನಾಗಿ, ಕಿರಿಯರಿಗೆ ತಂದೆಯ ಸ್ಥಾನದಲ್ಲಿ ನಿಂತು, ಮಹಿಳೆಯರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಸೇವೆ ಮಾಡಿದ್ದೇನೆ.
ಕೊರೋನಾ ಸಂದರ್ಭದಲ್ಲಂತೂ ಸೇವೆಯ ಕೆಲಸದಲ್ಲಿ ತೊಡಗಿದ್ದಾಗಲೇ ನನ್ನ ಜೀವಕ್ಕೆ ಆಪತ್ತು ತಂದುಕೊಂಡಿದ್ದೆ. ಇವೆಲ್ಲವೂ ಸಮಾಜಕ್ಕಾಗಿ ಮಾಡಿದ್ದೇ ಹೊರತು ಹಣ ಸಂಪಾದನೆಯ ಗುರಿಯಿಂದ ಅಲ್ಲ. ದೇವರ ಕೃಪೆಯಿಂದ ಜೀವನಕ್ಕೆ ಬೇಕಾದಷ್ಟು ಹಣವನ್ನು ಇದಾಗಲೇ ಹೊಂದಿದ್ದೇನೆ. ಇನ್ನು ಮುಂದೆ ಮಣ್ಣಿನ ಋಣವನ್ನು ತೀರಿಸುವುದಕ್ಕೆ ಸಮಾಜ ಸೇವೆಯಲ್ಲಿಯೇ ತೊಡಗುವ ಇಚ್ಛೆಯನ್ನು ಹೊಂದಿದ್ದೇನೆ. ನಿಮ್ಮ ಮನೆಯ, ನಿಮ್ಮ ಊರಿನ, ಸಮಗ್ರ ಬೇಲೂರಿನ ಅಭಿವೃದ್ಧಿ ಕಾರ್ಯದಲ್ಲಿ ನೀವು ಪಾಲುದಾರರಾಗಬೇಕೆಂದರೆ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿ ಎಂದು ಈ ಮೂಲಕ ಕೋರಿಕೊಳ್ಳುತ್ತೇನೆ.
ನೂರಾರು ವರ್ಷಗಳ ಇತಿಹಾಸವಿರುವ, ನಿತ್ಯ ಸಾವಿರಾರು ಜನ ಭೇಟಿ ನೀಡುವ ಬೇಲೂರು ಕ್ಷೇತ್ರ ಇದುವರೆಗೆ ಅಭಿವೃದ್ಧಿಯಾಗದೇ ಇರುವುದು ಶೋಚನೀಯ ಸಂಗತಿ. ಈ ಕ್ಷೇತ್ರವನ್ನು ಕನಸಿನ ಕ್ಷೇತ್ರವನ್ನಾಗಿಸುವಲ್ಲಿ ಹಗಲು ರಾತ್ರಿ ಶ್ರಮ ವಹಿಸುತ್ತೇನೆ ಮತ್ತು ನೀವು ಯಾವುದೇ ಸಮಯಕ್ಕೆ ಕಷ್ಟವೆಂದು ಕರೆ ಮಾಡಿದರೂ ನಿಮ್ಮ ಸ್ಪಂದನೆಗಾಗಿ ನಾನಿರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.