ಹಾಸನ: ಹೊಳೆನರಸೀಪುರದಲ್ಲಿ ಚುನಾವಣಾ ಅಕ್ರಮ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ನಾಳೆ ನಡೆಯುವ ಹೊಳೆನರಸೀಪುರ ವಿಧಾನಸಭೆ ಕ್ಷೇತ್ರದ ಚುನಾವಣೆಯನ್ನು ನಿಲ್ಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ದಂಡಿಗನಹಳ್ಳಿ ಹೋಬಳಿಯ ಅಣ್ಣೇನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತದಾರರಿಗೆ ಕೋಳಿ ಹಾಗೂ ಹಣವನ್ನು ಹಂಚುತ್ತಿದ್ದ ಬಗ್ಗೆ ಮಾಹಿತಿ ದೊರೆತ ನಂತರ ಸ್ಥಳಕ್ಕೆ ತೆರಳಿದಾಗ ನನ್ನ ಮೇಲೆ ಹಾಗೂ ಅಂಗರಕ್ಷಕರು, ವಾಹನದ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರಿನ ಗಾಜುಗಳನ್ನು ಒಡೆದು ಹಾಕಲಾಗಿದೆ. ಈಗಾಗಲೇ ದೂರು ದಾಖಲಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದೇನೆ ಎಂದರು. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿಬ್ಬಂದಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ಜೆಡಿಎಸ್ ಅಭ್ಯರ್ಥಿ ಎಚ್.ಡಿ ರೇವಣ್ಣ ಅವರ ಅಧೀನದಲ್ಲಿದ್ದು ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯನ್ನು ಮುಂದೂಡಬೇಕು. ಬೂತ್ ಗಳಿಗೆ ತಲುಪಿಸಿರುವ ಹಣ ಹಾಗೂ ಕೋಳಿ ದಾಸ್ತಾನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿದರು. ಅಗತ್ಯ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮತಗಟ್ಟೆ ಒಳಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.