ಹೊಳೆನರಸೀಪುರ: ಕ್ಷೇತ್ರದ ಜನತೆ ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಜೆಡಿಎಸ್‌ನ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿ ಶಾಸಕ ಎಚ್.ಡಿ ರೇವಣ್ಣನವರು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರ ಸ್ವಯಂ ಅಭಿವೃದ್ಧಿಗೆ ಸಾಕಷ್ಟು ಸರಕಾರಿ ಕಾಮಗಾರಿಗಳನ್ನು ಮಾರ್ಪಾಟುಗೊಳಿಸಿಕೊಂಡಿದ್ದಾರೆ.
ಅವರ ಕುಟುಂಬದ ಒಡೆತನದ ಕಲ್ಯಾಣ ಮಂದಿರ, ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ರೈಲ್ವೆ ಮೇಲ್ಸೇತುವೆ ದಿಕ್ಕನ್ನೇ ಬದಲಿಸಿದ್ದಾರೆ. ಇದರಿಂದ ಅವರ ವಾಣಿಜ್ಯ ಕಟ್ಟಡಗಳಿಗೆ ಪಾರ್ಕಿಂಗ್ ಸ್ಥಳಾವಕಾಶವಾಗಿದೆ. ಅವರು ನೀರಾವರಿ ಮತ್ತು ಏತನೀರಾವರಿ ಅನುಕೂಲತೆ ಮಾಡಿರುವ ಕಡೆಗಳಲ್ಲಿ ಅವರ ಒಡೆತನದ ಕೃಷಿ ಭೂಮಿ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದನ್ನು ಅಭಿವೃದ್ಧಿ ಎಂದು ನಂಬಬೇಕೇ ? ಎಂದು ಪ್ರಶ್ನಿಸಿದ್ದಾರೆ.
ಜೆಡಿಎಸ್‌ನ ಯಾವುದೇ ಬೆದರಿಕೆಗೆ ಹೆದರದೆ ಮುಕ್ತವಾಗಿ ಮತದಾನದಲ್ಲಿ ತೊಡಗಬೇಕು. ಬಹುತೇಕ ಸರಕಾರಿ ನೌಕರರು ಅವರಿಗೆ ಬೆದರಿ ಅವರ ಮಾತನ್ನು ಕೇಳುತ್ತಿದ್ದಾರೆ. ಪೊಲೀಸರು ಪ್ರಕರಣಗಳ ಪೂರ್ವಾಪರ ಅರಿಯದೇ ಏಕಪಕ್ಷೀಯವಾಗಿ ಕೇಸು ದಾಖಲಿಸದಂತೆ ರಾಜ್ಯ ಹಂತದಿಂದ ಸೂಚನೆ ಕೊಡಿಸಲಾಗಿದೆ. ಸದ್ಯದಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಸಂದರ್ಭ ದೋಷಪೂರಿತ ವಿವರ ಒದಗಿಸಿದ ಮತ್ತು ರೇವಣ್ಣ ಒಬ್ಬ ಜನಪ್ರತಿನಿಧಿಯಾಗಿ ಚುನಾವಣಾ ಅಕ್ರಮ ನಡೆಸಿದ ಬಗ್ಗೆ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಹಂತದಲ್ಲಿದೆ. ಮುಂದಿನ 7 ದಿನಗಳೊಳಗೆ ತೀರ್ಪು ಹೊರ ಬೀಳುವ ಸಂಭವ ಇದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರೇಣು ಕುಮಾರ್, ತಾಲೂಕು ಮಂಡಳದ ಮಾಜಿ ಅದ್ಯಕ್ಷರುಗಳಾದ ಎಂ.ಎನ್.ರಾಜು, ಮಳಲಿ ನಾರಾಯಣಗೌಡ, ಶಾಂತಿಗ್ರಾಮ ಮಂಡಲದ ಅಧ್ಯಕ್ಷ ಶ್ರೀಹರಿ ಹಾಗೂ ತಾಲೂಕು ಕಾರ್ಯ ದರ್ಶಿ ಪ್ರಸನ್ನಕುಮಾರ್ ಉಪಸ್ಥಿತರಿದ್ದರು.