ಜಾವಗಲ್: ಒಬ್ಬರು ಸೀರೆ, ಗಡಿಯಾರ ಹಾಗೂ ಹಣದ ಆಮಿಷದಿಂದ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರೆ ಮತ್ತೊಬ್ಬರು ನ್ಯಾಯಬೆಲೆ ಅಂಗಡಿಯವರ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ಎಚ್ ಕೆ ಸುರೇಶ್ ಮತ್ತು ಮಾಜಿ ಸಚಿವ ಬಿ ಶಿವರಾಂ ವಿರುದ್ಧ ಶಾಸಕ ಕೆ. ಎಸ್. ಲಿಂಗೇಶ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಜಾವಗಲ್ ಗ್ರಾಮದಿಂದ ರಾಮಕೃಷ್ಣಪುರಕ್ಕೆ ನೂತನ ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ.ಎಸ್ ಲಿಂಗೇಶ್ ಶಾಸಕನಾದ ಬಳಿಕ ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತಂದು ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. ಬೇರೆ ವ್ಯಕ್ತಿಗಳ ರೀತಿ ಸೀರೆ, ಪಂಚೆ, ಗಡಿಯಾರ ಮೊದಲಾದ ಯಾವುದೇ ವಸ್ತುಗಳನ್ನು ಮತದಾರರಿಗೆ ನೀಡಿ ಚುನಾವಣೆಯಲ್ಲಿ ಮತ ಪಡೆಯುವ ಕೆಲಸವನ್ನು ಮಾಡಿಲ್ಲ ಬದಲಿಗೆ ಪ್ರತಿಯೊಂದು ಗ್ರಾಮಕ್ಕೂ ಪ್ರಾಮಾಣಿಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯವನ್ನು ಮಾಡಿದ್ದೇನೆ ಎಂದು ಪರೋಕ್ಷವಾಗಿ ಹೆಚ್.ಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
2೦ ವರ್ಷಗಳಿಂದ ಶಾಸಕನಾಗಿದ್ದ ಮತ್ತೊಬ್ಬ ವ್ಯಕ್ತಿ ಕೇವಲ ಸಭೆ – ಸಮಾರಂಭಗಳಲ್ಲಿಭಾಗವಹಿಸಿರುವುದು ಹಾಗು ನ್ಯಾಯಬೆಲೆ ಅಂಗಡಿಯವರ ಮೂಲಕ ರಾಜಕೀಯ ಮಾಡಿರುವುದು ಬಿಟ್ಟರೆ ಯಾವ ಕೆಲಸವನ್ನು ಕ್ಷೇತ್ರಕಾಗಿ ಮಾಡಿಲ್ಲ ಎಂದು ಮಾಜಿ ಸಚಿವ ಬಿ ಶಿವರಾಂ ವಿರುದ್ಧ ಶಾಸಕ ಕೆ ಎಸ್ ಲಿಂಗೇಶ್ ವಾಗ್ದಾಳಿ ನಡೆಸಿದರು.
ಇಂಜಿನಿಯರ್ ಈರಯ್ಯ ಮಾತನಾಡಿ ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ರಾಮಕೃಷ್ಣಪುರದಿಂದ ಜಾವಗಲ್ ಗೆ ಸಂಪರ್ಕ ಕಲ್ಪಿಸುವ ಎರಡು ಕಿಲೋಮೀಟರ್ ಉದ್ದದ ಡಾಂಬರ್ ರಸ್ತೆ ನಿರ್ಮಿಸಲು ೭೫ ಲಕ್ಷಗಳ ಅನುದಾನ ಮಂಜುರಾಗಿದ್ದು, ಆದಷ್ಟು ಬೇಗ ರಸ್ತೆ ನಿರ್ಮಿಸಿ ಗ್ರಾಮಸ್ಥರ ಬಳಕೆಗೆ ನೀಡಲಾಗುವುದು ಎಂದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾವಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ, ಸದಸ್ಯರುಗಳಾದ ಲಕ್ಷ್ಮೀ ರವಿಶಂಕರ, ಪರಮೇಶ, ಸಂತೋಷ, ಗುತ್ತಿಗೆದಾರರಾದ ಜ್ಞಾನೇಶ, ಜಾವಗಲ್ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಸಿದ್ದೇಗೌಡ, ಗ್ರಾಮಸ್ಥರಾದ ಭಾನುಪ್ರಕಾಶ, ಹನುಮಂತಯ್ಯ, ರವಿನಾಯ್ಕ ಮತ್ತಿತರರು ಉಪಸ್ಥಿತಿಯಿದ್ದರು