ಆಲೂರು: ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬಕ್ಕೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ 7 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅವರಿಗೆ ಕೊಡುಗೆ ನೀಡಬೇಕು ಎಂದು ಭವಾನಿ ರೇವಣ್ಣ ತಿಳಿಸಿದರು.
ಆಲೂರು ಪಟ್ಟಣದಲ್ಲಿ ಆಯೋಜಿಸಿದ್ದ ರೋಡ್ ಶೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇವರು ಜೆ.ಡಿ.ಎಸ್ ತಾಲೂಕು ಕಚೇರಿ ಆವರಣದಿಂದ ಕೆಇಬಿ ವರೆಗೆ ಹಾಗೂ ಕೆಇಬಿ ಯಿಂದ ಕೊನೆಪೇಟೆಯವರೆಗೆ ರೋಡ್ ಶೋ ಮೂಲಕ ಶಾಸಕ ಹೆಚ್.ಕೆ ಕುಮಾರಸ್ವಾಮಿಯವರ ಪರ ಮತಯಾಚನೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಹಾಗೂ ದಿನಸಿ ಪದಾರ್ಥಗಳ ಬೆಲೆ ಹೆಚ್ಚಿರುವುದರಿಂದ ಜನಸಾಮಾನ್ಯರು ಕೊಳ್ಳಲು ಪರದಾಡುವಂತಾಗಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ತಿಳಿಸಿರುವಂತೆ ಪಂಚರತ್ನ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸುವುದರ ಮೂಲಕ ರೈತರಿಗೆ, ವೃದ್ಧರಿಗೆ ಪಿಂಚಣಿ, ಜನಸಾಮಾನ್ಯರಿಗೆ 5 ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು. ಹಾಸನ ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲೂ ಅತ್ಯಧಿಕ ಮತಗಳಿಂದ ನಮ್ಮ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದು ತಿಳಿಸಿದರು.
ಶಾಸಕ ಹೆಚ್. ಕೆ ಕುಮಾರಸ್ವಾಮಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಹೆಚ್ಚಳ, ರಸಗೊಬ್ಬರಗಳ ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ಕೂಡಿರುವ ಬಿಜೆಪಿ ಪಕ್ಷವನ್ನು ಜನರು ಬೆಂಬಲಿಸುತ್ತಾರೋ, ರೈತರ ಬೆನ್ನೆಲುಬಾಗಿ, ರೈತರ ಸಾಲ ಮನ್ನಾ, ಪ್ರತಿ ಎಕರೆಗೆ 10 ರೂ. ಪ್ರೋತ್ಸಾಹ ಧನ, 5,000ರೂ. ವೃದ್ಧಾಪ್ಯ ವೇತನ, ಎಲ್ಲಾ ವರ್ಗದವರಿಗೆ 5 ಸಿಲಿಂಡರ್ ಉಚಿತ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೋ ಎಂಬುದು ಚುನಾವಣಾ ಫಲಿತಾಂಶದ ನಂತರ ಹೊರ ಬೀಳಲಿದೆ. ಎಲ್ಲಾ ಜಾತಿ-ಧರ್ಮ-ವರ್ಗದವರಿಗೆ ಸಾಮಾಜಿಕ ಸಮಾನತೆಯನ್ನು ನೀಡಿದ ಪಕ್ಷ ಜೆಡಿಎಸ್ ಪಕ್ಷ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹೆಚ್.ಬಿ ಧರ್ಮರಾಜ್, ದೇವೇಂದ್ರ, ಆಶಾ ಮುಂತಾದವರು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಯೊಗೇಶ್, ಮಲ್ಲಿಕಾರ್ಜುನ್, ಗೌಡಪ್ಪ, ಮಂಜೇಗೌಡ, ಗೋಪಿನಾಥ, ದೊರೆಸ್ವಾಮಿ, ವೀರಭದ್ರಸ್ವಾಮಿ, ಪಾಣಿ, ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.