ಬೇಲೂರು: ನಾನು ತಂದಿರುವ ಕಾಮಗಾರಿಗಳು ಹಾಗೂ ಈಗ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿದ್ದು ಕಂಡು ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಹುಲ್ಲಳ್ಳಿ ಸುರೇಶ್ ಅವರಿಗೆ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಾಸಕರಾಗಿ ಆಯ್ಕೆಯಾಗಿರುವ ಹುಲ್ಲಳ್ಳಿ ಸುರೇಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಮುಂದಿನ ತಾಲೂಕಿನ ಅಭಿವೃದ್ದಿಗೆ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಆದರೆ ಯಾರೇ ಕಳಪೆ ಕಾಮಗಾರಿ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಿ. ಅದರೆ ಈಗ ನಡೆಯುತ್ತಿರುವ ಕಾಮಗಾರಿ ನಿಲ್ಲಿಸುವುದಾಗಲಿ ಅಥವಾ ಈಗಾಗಲೇ ನನ್ನ ಅವಧಿಯಲ್ಲಿ ಆಗಿರುವ ಟೆಂಡರ್ ತಡೆ ಹಿಡಿದು ತನ್ನ ಕಡೆಯವರಿಗೆ ನೀಡಿದ್ದು ಕಂಡುಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕರಿಗೆ ಚಾಟಿ ಬೀಸಿದ ಅವರು ಇನ್ನು ಶಾಸಕರಾಗಿ ಅವರು ಪ್ರಮಾಣ ವಚನ ಸ್ವಿಕರಿಸಿಲ್ಲ.
ಅಲ್ಲದೆ ನಾವು ಸಹ 5 ವರ್ಷ ಸದನದಲ್ಲಿ ಕೆಲಸ ಮಾಡಿದ್ದೇನೆ ಎಂದೂ ಸಹ ನಾನು ದ್ವೇಷದ ರಾಜಕಾರಣ ಮಾಡಿಲ್ಲ. ಈಗೇನು ಕೆಲಸ ಕಾರ್ಯಗಳು ನಡೆಯುತ್ತಿದೆ, ಬಸವಕೊಪ್ಪಲು ಚೌಡನಹಳ್ಳಿ, ಕೌರಿ ಹಾಗು ಮಲೆನಾಡು ಭಾಗದಲ್ಲಿ ಕೆಲಸ ನಡೆಯುತ್ತಿದೆ ಅದು ನಾವು ತಂದಿರುವ ಕೆಲಸಗಳು ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಕೆಲಸ ಕಾರ್ಯಗಳು ನಿಂತಿದ್ದವು. ಟೆಂಡರ್ ಈಗ ಪ್ರಾರಂಭವಾದ ನಂತರ ಈಗಾಗಲೇ ಎಲ್ಲಾ ಕಾಮಗಾರಿಗಳ ಪೂಜೆ ಆಗಿದ್ದು, ಈಗ ಮತ್ತೆ ನೂತನ ಶಾಸಕರು ನಾನು ತಂದಿದ್ದೇನೆ ಎಂಬಂತೆ ಬಿಂಬಿಸಲು ಪೂಜೆ ಮಾಡಲು ಹೋಗಿದ್ದಾರೆ. ಮಲೆನಾಡು ಭಾಗಕ್ಕೆ ಈಗಾಗಲೇ 20 ಕೋಟಿ ತಂದು ಕಾಮಗಾರಿ ಶುರುವಾಗಿದೆ. ಅದರಂತೆ ಹಳೆಬೀಡಿನ ಭಾಗದಲ್ಲಿ ಬಸವೇಶ್ವರ ವೃತ್ತದಿಂದ ಬಸ್ತಿಹಳ್ಳಿ ವೃತ್ತದವರೆಗೆ 50 ಕೋಟಿ ಅನುದಾನ ತಂದು ಪೂಜೆ ಮಾಡಲಾಗಿದೆ. ಮತ್ತೆ ಪೂಜೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಮಾಡಿರುವ ಕೆಲಸಗಳಿಗೆ ಅವರು ಪೂಜೆ ಮಾಡಲು ಬಿಡುವುದಿಲ್ಲ. ಅವರು ತಂದು ಅಭಿವೃದ್ಧಿ ಪಡಿಸುವುದಕ್ಕೆ ನನ್ನ ಅಭ್ಯಂತರವಿಲ್ಲ.
ಜೆಜೆಎಂ ಸ್ಕೀಂ ನಲ್ಲಿ 250 ಕೋಟಿ ವೆಚ್ಚದಲ್ಲಿ ಪ್ರತೀ ಗ್ರಾಮಕ್ಕೂ ಓವರ್ ಟ್ಯಾಂಕ್ ನಿರ್ಮಾಣಕ್ಕೆ ನಾನು ಅನುದಾನ ತಂದಿದ್ದೇನೆ, ಅದು ನನ್ನ ಸಾಧನೆ. ಪೈಪ್ ಲೈನ್‌ಗೆ 250 ಕೋಟಿಗೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ಮಾಡಿಯಾಗಿದ್ದು, ಇದರ ಹಿಂದೆ ನನ್ನ, ಪ್ರೀತಮ್ ಗೌಡರ ಹಾಗು ಕುಮಾರಸ್ವಾಮಿಯವರ ಶ್ರಮವಿದೆ. ಹಾಸನ-ಬೇಲೂರು-ಸಕಲೇಶಪುರ ಗ್ರಾಮಗಳಿಗೆ ನನ್ನ ಶ್ರಮವಿದೆ. ಒಟ್ಟು 887 ಕೋಟಿ ನಮ್ಮೆಲ್ಲರ ಶ್ರಮದಿಂದ ತಂದಿದ್ದೇವೆ. ಇವುಗಳಿಗೆ ಪೂಜೆ ಮಾಡಬಹುದು ಹೊರತು ಅದು ನಿಮ್ಮ ಹೆಸರು ಹಾಕಿಸಿಕೊಳ್ಳಲು ಸಾಧ್ಯವಿಲ್ಲ.
ತಾಕತ್ತಿದ್ದರೆ ಹೆಬ್ಬಾಳು ಏತ ನೀರಾವರಿ ಯೋಜನೆಯನ್ನು ತನ್ನಿ. ಈಗಾಗಲೇ ಹೆಬ್ಬಾಳು ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಅದು ಟೆಂಡರ್ ಗೂ ಸಹ ಅನುಮೋದನೆ ಸಿಕ್ಕಿದ್ದು, ಇನ್ನೇನು ಅದು ಸಹಿ ಹಾಕಬೇಕು ಎನ್ನುವಷ್ಟರಲ್ಲಿ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಅದನ್ನು ತಡೆ ಹಿಡಿಯಲಾಗಿದೆ. ನಿಮಗೆ ತಾಕತ್ತಿದ್ದರೆ ಅದನ್ನು ತನ್ನಿ, ನಾನು ನಿಮಗೆ ತಾಲೂಕಿನ ಸಮಸ್ತ ಜನತೆಯ ಪರವಾಗಿ ನಿಮ್ಮನ್ನು ಅದ್ದೂರಿಯಾಗಿ ಸನ್ಮಾನಿಸುತ್ತೇನೆ. ಯಾರೋ ಹಿಂಬಾಲಕರ ಮಾತು ಕೇಳಿ ದ್ವೇಷದ ರಾಜಕಾರಣ ಮಾಡಿದರೆ ನನಗೂ ರಾಜಕಾರಣ ಮಾಡಲು ಗೊತ್ತು, ನಾನು ರಾಜಕಾರಣ ಮಾಡಿ ತೋರಿಸುತ್ತೇನೆಂದು ಸವಾಲು ಹಾಕಿದರು.