ಹಾಸನ: ಇಬ್ಬರ ನಡುವೆ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಕಾಂಗ್ರೆಸ್ ಪಕ್ಷ ಹಾಸನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆಯಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ಪಕ್ಷದವರು ಕ್ಷೇತ್ರದಲ್ಲಿ ಗೊಂದಲ ಮೂಡಿಸುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಬದಲು ಜೆಡಿಎಸ್ ಗೆ ಮತದಾನ ಮಾಡುವಂತೆ ಪ್ರಚಾರ ಮಾಡುತ್ತಿದ್ದಾರೆ, ಇಂತಹ ಅಸಹ್ಯ ರಾಜಕೀಯ ಎಂದೂ ಕಂಡಿಲ್ಲ ಎಂದು ದೂರಿದರು. ಸಭ್ಯ ರಾಜಕೀಯ ಮಾಡುವ ತಾಕತ್ತು ಇಲ್ಲದವರು ಇಂತಹ ಅಪಪ್ರಚಾರ ಮಾಡುತ್ತಾರೆ, ಯೊಗ್ಯತೆ ಇಲ್ಲದವರು ಇಂತಹ ಅಪಪ್ರಚಾರ ಮಾಡುತ್ತಾ ಕಾಂಗ್ರೆಸ್ ವಿರುದ್ದ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ಜನರ ಸಮಸ್ಯೆ ಆಲಿಸಲು ಬಾರದ ಜೆಡಿಎಸ್ ನವರು ಇದೀಗ ಚುನಾವಣೆ ಸಂದರ್ಭದಲ್ಲಿ ದೇಣಿಗೆ ಹೆಸರಲ್ಲಿ ಭಿಕ್ಷೆ ಬೇಡುವ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು. ಸ್ವರೂಪ್ ಅವರು ಸಾಮಾನ್ಯ ಕಾರ್ಯಕರ್ತ ಎನ್ನುವುದು ಎಷ್ಟು ಸರಿ? ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದು, ಕುಟುಂಬದ ಸದಸ್ಯರು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ನಿಜವಾದ ಸಾಮಾನ್ಯ ಕಾರ್ಯಕರ್ತ ಬನವಾಸೆ ರಂಗಸ್ವಾಮಿ ರೈತನ ಮಗನಾಗಿ ಹೋರಾಟದಲ್ಲಿ ಬಂದವನಾಗಿದ್ದು ಹಗುರವಾಗಿ ಕಾಣಬಾರದು ಎಂದರು.
ಬಿಜೆಪಿಯವರು ಸಹ ಕ್ಷೇತ್ರದಲ್ಲಿ ಹಣ-ಹೆಂಡ-ಬಾಡೂಟ ಹಂಚುತ್ತ ರಾಜಕೀಯ ಮಾಡುತ್ತಿದ್ದಾರೆ, ಜನರನ್ನು ಉದ್ಧಾರ ಮಾಡಲು ರಾಜಕೀಯ ಮಾಡದೆ ಹಾಳು ಮಾಡಲು ಹೊರಟಿದೆ. ನೊಂದವರಿಗೆ ನೆರವಾಗದೆ ತಪ್ಪು ಸಂದೇಶ ಸಾರುತ್ತಿರುವ ಎರಡೂ ಪಕ್ಷದ ವಿರುದ್ಧ ಕಾಂಗ್ರೆಸ್ ಗೆಲುವು ನಿಶ್ಚಿತ, ಜನರೇ ಜನಾರ್ದನ, ಅವರ ತೀರ್ಮಾನಕ್ಕೆ ಬದ್ಧ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನಯ್ ಗಾಂಧಿ, ಮುನಿ ಸ್ವಾಮಿ, ಜಿ.ಟಿ ಕುಮಾರ್, ಚಂದ್ರು ಇದ್ದರು