ಹಾಸನ: ಬಗರ್ ಹುಕುಂ ಸಮಿತಿಯ ಅಧ್ಯಕ್ಷನಾಗಿ ಯಾವುದೇ ಅಕ್ರಮ ಭೂ ಮಂಜೂರಾತಿ ಮಾಡಿಲ್ಲ ಅಕ್ರಮ ಮಾಡಿರುವುದನ್ನು ಸಾಬೀತು ಪಡಿಸಿದರೆ ಗಲ್ಲಿಗೇರಲು ಸಿದ್ದ ಎಂದು ಬೇಲೂರು ಶಾಸಕ ಕೆ.ಎಸ್ ಲಿಂಗೇಶ್ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಗರ್ ಹುಕುಂ ಸಮಿತಿಯ ಸದಸ್ಯನಾಗಿ 2019 ಜುಲೈ 26ರಂದು ನೇಮಕಗೊಂಡು ಮಾರ್ಚ್ 28 2023ವರೆಗೂ ಕಾರ್ಯ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ 720 ಎಕರೆ ಜಮೀನನ್ನು ಮಂಜೂರು ಮಾಡಿ ಕೊಟ್ಟಿದ್ದು 562 ಮಂದಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಆದರೆ ಇತ್ತೀಚಿಗೆ ತಾಲೂಕು ಬಿಜೆಪಿ ಅಧ್ಯಕ್ಷರಾದ ಅಡಗೂರು ಆನಂದ್ ಅವರು ಪತ್ರಿಕಾಗೋಷ್ಠಿ ನಡೆಸಿ ಲಿಂಗೇಶ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿ 2750 ಎಕರೆ ಭೂಮಿ ಹಗರಣದಲ್ಲಿ ಭಾಗಿಯಾಗಿದ್ದು ಅವರನ್ನು ಬಂಧಿಸುವಂತೆ ತಾಲೂಕು ದಂಡಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚಿಸುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಕ್ರಮ ಭೂ ಮಂಜೂರಾತಿಯಲ್ಲಿ ಭಾಗಿಯಾಗಿರುವ 15 ಜನರ ಮೇಲೆ ತನಿಖೆ ನಡೆಸಿ ಮುಂದಿನ 2023 ಜುಲೈ 7ರ ಒಳಗೆ ವರದಿ ದಾಖಲಿಸುವಂತೆ ಸೂಚನೆ ನೀಡಿದೆ. ನಾನೊಬ್ಬ ಜನಪ್ರತಿನಿಧಿಯಾಗಿ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ. ಆದರೆ ಆನಂದ್ ಅವರ ಹೇಳಿಕೆಯಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನೆಯಾಗಿದೆ ಎಂದರು.
ನಾನು ಬಗರ್ ಹುಕುಂ ಸಮಿತಿಯ ಅಧ್ಯಕ್ಷನಾಗಿ ಕೇವಲ 562 ಕಡತಗಳನ್ನು ಅನುಮೋದಿಸಿದ್ದು ಒಟ್ಟು 720 ಎಕರೆಗಳನ್ನು ಜಮೀನು ಮಂಜೂರಾತಿ ಮಾಡಿದ್ದೇನೆ. ಆದರೆ 2750 ಭೂ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಸರಿಯಲ್ಲ. ಬೇಕಿದ್ದರೆ ಸಿಬಿಐ, ಸಿಐಡಿ ತನಿಖೆಗೂ ಸಿದ್ಧನಿದ್ದೇನೆ. ಆರೋಪ ಸಾಬೀತು ಮಾಡಿದರೆ ಗಲ್ಲಿಗೇರಲು ಸಿದ್ದನಿದ್ದೇನೆ ಎಂದು ಲಿಂಗೇಶ ತಿಳಿಸಿದರು.
ದೂರು ನೀಡಿರುವ ದಾಖಲೆಯಲ್ಲಿ ಬೇಲೂರು ಪುರಸಭೆಯಿಂದ 3 ಕಿಲೋಮೀಟರ್ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಅಕ್ರಮ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದ್ದು, ಈ ಗ್ರಾಮಗಳ ಸುಮಾರು 38 ಕಡತಗಳನ್ನು ವಜಾ ಗೊಳಿಸಲಾಗಿದೆ ಜೊತೆಗೆ ಆ ಗ್ರಾಮಗಳಿಗೆ ಸಂಬಂಧಿಸಿದಂತೆ ಯಾವುದೇ ಭೂ ಮಂಜೂರಾತಿ ಆಗಿರುವುದಿಲ್ಲ. ಅಲ್ಲದೇ ಹೇಮಾವತಿ ಯಗಚಿ ಮುಳುಗಡೆ ರೈತರ ಮಂಜೂರಾತಿಗಾಗಿ ಗುರುತಿಸಿರುವ ಜಮೀನುಗಳನ್ನು ಸಹ ಮಂಜೂರಾತಿ ಮಾಡಿರುವುದಿಲ್ಲ ಎಂದು ತಿಳಿಸಿದರು.
ಯಾವುದೇ ಭೂ ಮಂಜೂರಾತಿ ಆಗಬೇಕಾದರೆ ಅಧಿಕಾರಿಗಳ ವರದಿಯನ್ನು ಆಧರಿಸಿ, ಸಮಿತಿಯು ಭೂಮಿಯನ್ನು ಅರ್ಹರಿಗೆ ಮಂಜೂರು ಮಾಡುತ್ತದೆ. ಹಾಗೇನಾದರೂ ಅಕ್ರಮ ನಡೆದಿದ್ದರೆ ಅದಕ್ಕೆ ಅಧಿಕಾರಿಗಳೇ ಕಾರಣ ಹೊರೆತು ಸಮಿತಿಯವರಲ್ಲ. ಸಮಿತಿಯ ವರದಿ ನೀಡಿದ ಬಳಿಕವೂ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಭೂ ಮಂಜೂರಾತಿ ಕುರಿತು ವರದಿ ನೀಡಿದ ಬಳಿಕವಷ್ಟೇ ಸಮಿತಿಯ ಸದಸ್ಯರು ಸಹಿ ಹಾಕಿ ಮಂಜೂರಾತಿಗೆ ಅಂಕಿತ ಹಾಕುತ್ತಾರೆ. ಹೀಗಿರುವಾಗ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂದು ಲಿಂಗೇಶ್ ಸ್ಪಷ್ಟಪಡಿಸಿದರು.
ನನ್ನ ಮೇಲೆ ಬಂದಿರುವ ಆಪಾದನೆಯಿಂದ ತೀವ್ರ ನೋವು ಉಂಟಾಗಿದ್ದು, ಇದುವರೆಗೂ ಸಹ ಸಾರ್ವಜನಿಕ ಜೀವನದಲ್ಲಿ ಯಾವುದೇ ಅಕ್ರಮದಲ್ಲಿ ಭಾಗಿ ಯಾಗಿಲ್ಲ ಈಗ ಬಂದಿರುವ ಆಪಾದನೆಯಿಂದ ಮುಕ್ತನಾಗಲು ಕಾನೂನು ಹೋರಾಟಕ್ಕೆ ಸಿದ್ಧನಿದ್ದು, ಆರೋಪ ಮುಕ್ತನಾಗಿ ಹೊರಬರುವ ವಿಶ್ವಾಸವಿದೆ. ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ನನ್ನ ಮೇಲೆ ಆರೋಪಗಳನ್ನು ಮಾಡಿದ್ದು, ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ಲಿಂಗೇಶ್ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಬೇಲೂರು ತಾಲೂಕು ಘಟಕದ ಅಧ್ಯಕ್ಷ ತೋಚಾ ಅನಂತ ಸುಬ್ಬರಾಯ, ಮಲ್ಲೇಶ್ ಇದ್ದರು.