ಹಾಸನ: ಸ್ವಾರ್ಥ ರಾಜಕೀಯಕ್ಕಾಗಲಿ, ಯಾವುದೇ ಅಧಿಕಾರಕ್ಕಾಗಿ ಬಿಜೆಪಿ ಸೇರ್ಪಡೆಗೊಂಡಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ಸ್ಪಷ್ಟಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡಿದ್ದು ಸ್ವಾರ್ಥ ರಾಜಕೀಯಕ್ಕಾಗಿ ಅಥವಾ ಮುಂದೆ ಯಾವುದೇ ಅಧಿಕಾರಕ್ಕಾಗಿ ಬಿಜೆಪಿ ಸೇರ್ಪಡೆಕ್ಕೊಳ್ಳದೆ, ಕೇವಲ ಜನರ ಸೇವೆ ಮಾಡಲು ಉತ್ತಮ ವೇದಿಕೆಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದು, ಭಾರತ ದೇಶವನ್ನು ಮಾದರಿ ರಾಷ್ಟ್ರವಾಗಿ ಮಾಡಿದ್ದಾರೆ. ಇಂದು ವಿಶ್ವ ನಾಯಕರಾಗಿ ರೂಪುಗೊಂಡಿದ್ದು, ಅವರ ಉತ್ತಮ ಆಡಳಿತವನ್ನು ನೋಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಮುಂದೆಯೂ ಸಹ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡಲು ಸೇರ್ಪಡೆಗೊಂಡಿದ್ದು ಈ ಬಗ್ಗೆ ಬಿಜೆಪಿ ರಾಷ್ಟ್ರ ನಾಯಕರೊಂದಿಗೆ ರಾಜ್ಯ ನಾಯಕರೊಂದಿಗೆ ಚರ್ಚಿಸಿರುವುದಾಗಿ ರಾಮಸ್ವಾಮಿ ಸ್ಪಷ್ಟಪಡಿಸಿದರು. ಮುಂದೆ ಪಕ್ಷ ಬಲವರ್ಧನೆಗೆ ಹಾಗೂ ಪಕ್ಷ ಹೇಳಿದಂತೆ ಮುನ್ನಡೆಯುವುದಾಗಿ ಹೇಳಿದ ರಾಮಸ್ವಾಮಿಯವರು ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಷರತ್ತನ್ನು ಹಾಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅನರ್ಹತೆ ಕುರಿತು ಮಾತನಾಡುತ್ತಿದ್ದಾರೆ, ಸತ್ಯಮೇವ ಜಯತೆ ಎಂದು ಹೋರಾಟವನ್ನು ನಡೆಸುತ್ತಿದ್ದು, ಈ ಹಿಂದೆ ಸ್ವತಃ ರಾಹುಲ್ ಗಾಂಧಿ ಅವರೇ ವಿರೋಧಿಸಿ ವಿದೇಯಕವನ್ನು ಹರಿದು ಹಾಕಿದ್ದರು. ಇಂದು ಅವರೇ ಆ ಒಂದು ನಿಯಮದಡಿ ಅನರ್ಹರಾಗಿದ್ದಾರೆ. ಕಾಂಗ್ರೆಸ್ ಈ ಕುರಿತು ಹೋರಾಟ ಮಾಡುತ್ತಿರುವುದು ಸರಿಯಲ್ಲ ಎಂದರು.
ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡುವಂತೆ ಹೋರಾಟ ಮಾಡುತ್ತಿದ್ದ ಕೆಲ ಪಕ್ಷದ ನಾಯಕರು ಇಂದು ಸುಮ್ಮನಾಗಿದ್ದಾರೆ ಎಂದು ಟೀಕಿಸಿದ ರಾಮಸ್ವಾಮಿ ಜನರಿಗೆ ಒಳಿತು ಮಾಡುವ ಮನೋಭಾವ ಇಲ್ಲದ ಕಾರಣ ಸುಮ್ಮನಿದ್ದಾರೆ ಎಂದು ಟೀಕಿಸಿದರು.
ಮುಸ್ಲಿಮರಿಗೆ ಒಳ ಮೀಸಲಾತಿ ಕಡಿತದಿಂದ ಯಾವುದೇ ಅನ್ಯಾಯವಾಗಿಲ್ಲ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ 10% ಮೀಸಲಾತಿಯನ್ನು ನೀಡಿದ್ದು, ಇದರಿಂದ ಮುಸ್ಲಿಮರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಜೆಡಿಎಸ್ ನವರು ದೇವರಲ್ಲಿ ಪ್ರಾರ್ಥನೆ ಮಾಡುವಾಗ ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಪ್ರಚಾರಗಿಟ್ಟಿಸುತ್ತಾರೆ ಆದರೆ ಜಿಲ್ಲೆಯಲ್ಲಿನ ಬಗರ್ ಹುಕುಂ ಮಂಜೂರಾತಿ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡುವ ಮೂಲಕ ಮಂಜೂರಾತಿ ಆಗದಂತೆ ತಡೆದಿರುವ ಹಲವು ಉದಾಹರಣೆಗಳು ಇದೆ. ಇವರು ರೈತರ ಹಿತ ಕಾಯುವರೆ? ಎಂದು ಕಿಡಿಕಾರಿದರು.
ಎಚ್‌ಡಿಸಿಸಿ ಬ್ಯಾಂಕ್‌ನಲ್ಲಿ ಆಗುತ್ತಿರುವ ಆವ್ಯವಹಾರದ ಕುರಿತು ಮಾತನಾಡಬೇಡ ಎಂದು ಜೆಡಿಎಸ್ ನ ನಾಯಕರು ನನಗೆ ತಾಕೀತು ಮಾಡಿದರು ಇದರ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ನಡೆಯುತ್ತಿರುವ ಅವ್ಯವಹಾರ ತಪ್ಪು ಎಂದು ಹೇಳಿದ್ದಕ್ಕೆ ನನಗೆ ಇಂದು ಈ ಸ್ಥಿತಿ ಎಂದರು.
2008ರಿಂದಲೂ ಸಹ ಬಿಜೆಪಿ ಸೇರ್ಪಡೆ ಕುರಿತು ಚರ್ಚೆಗಳು ನಡೆದಿದ್ದು, ಬಿಜೆಪಿ ಮುಖಂಡರು ನನ್ನನ್ನು ಆಹ್ವಾನಿಸಿದ್ದರು. ಬಿ.ಎಸ್ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಸಹ ನಿಮ್ಮಂತ ನಿಷ್ಠಾವಂತ ರಾಜಕೀಯ ವ್ಯಕ್ತಿ ಪಕ್ಷಕ್ಕೆ ಬೇಕಾಗಿದ್ದು, ಉನ್ನತ ಹುದ್ದೆಯನ್ನು ನೀಡುವುದಾಗಿ ಆಹ್ವಾನ ನೀಡಿದ್ದರು. ನಾನು ಓಡಿ ಹೋಗಲಿಲ್ಲ. ಪಕ್ಷಾಂತರ ಮಾಡುವ ಇಚ್ಛೆ ಆ ಸಂದರ್ಭದಲ್ಲಿ ನನಗೆ ಇರಲಿಲ್ಲ. ಆದ್ದರಿಂದ ಇಂದು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿ ಕೇಂದ್ರ ನಾಯಕರಿಂದ ಆಹ್ವಾನ ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಧಿಕೃತವಾಗಿ ಸೇರ್ಪಡೆ ಆದೆ. ಇದಕ್ಕೆ ಅನ್ಯತಾ ಭಾವಿಸಬಾರದು ಎಂದು ಸ್ಥಳೀಯ ಕಾಯಕರ್ತರಿಗೆ ಹಾಗೂ ಬಿಜೆಪಿ ನಾಯಕರಿಗೆ ಹೇಳಿದರು
ಜೆಡಿಎಸ್ ಪಕ್ಷವನ್ನು ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಇಂದು ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಗೊಂದಲ ಮುಂದುವರೆದಿದೆ. ಒಂದು ಕುಟುಂಬದ ಸಮಸ್ಯೆಯನ್ನು ಬಗೆಹರಿಸದ ಇವರು ಜನರ ಸಮಸ್ಯೆಯನ್ನು ಹೇಗೆ ಆಲಿಸಲಿದ್ದಾರೆ ಎಂದು ಲೇವಡಿ ಮಾಡಿದರು.
ಯಾವುದೇ ಪಲಾಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ನನಗೆ ದ್ರೋಹ ಮಾಡಿದರು. ನನ್ನ ವಿರುದ್ಧ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದರು. ಮೋಸಗಾರ ಎಂದು ಕೂಗಿಸಿದರು, ಇಷ್ಟೆಲ್ಲಾ ಆದ ನಂತರ ಜೆಡಿಎಸ್ ರಾಜೀನಾಮೆಗೆ ಮನಸ್ಸು ಮಾಡಿದೆ ಎಂದರು. ವಿಧಾನಸಭೆ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು, ಹಣದ ಬಲದಿಂದ ಸರ್ಕಾರವನ್ನು ಕಟ್ಟಬಾರದು, ಗುಣದ ಬಲದಿಂದ ಕಟ್ಟಬೇಕು. ಯೋಗ್ಯರು, ಬಡವರು ಸ್ಪರ್ಧಿಸಿ ಸರ್ಕಾರ ರಚನೆಯಾದರೆ, ಉತ್ತಮ ಆಡಳಿತ ನೀಡಲು ಸಾಧ್ಯವಿದೆ ಎಂದು ಎ.ಟಿ ರಾಮಸ್ವಾಮಿ ತಿಳಿಸಿದರು..