ಹಾಸನ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತ್ತೊಮ್ಮೆ ನಮ್ಮ ನಾಡಿನ ಜನರು ಬಿಜೆಪಿಯನ್ನು ಆಯ್ಕೆ ಮಾಡಿ ಅಧಿಕಾರಕ್ಕೆ ತರಲಿದ್ದಾರೆ ಎಂಬ ಭರವಸೆ ಇದೆ ಎಂದರು. ಕೂಡ್ಲಿಗಿ ಶಾಸಕ ಹಾಗೂ ಇನ್ನು ಕೆಲವು ಶಾಸಕರು ಬಿಜೆಪಿ ಪಕ್ಷ ತೊರೆಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕೂಡ್ಲಿಗಿ ಶಾಸಕರು ಬೇರೊಂದು ಕ್ಷೇತ್ರದಿಂದ ಬಂದಿದ್ದರು ಮತ್ತೆ ಮರಳಿ ಅವರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ ಅಷ್ಟೇ..!! ಕೂಡ್ಲಿಗಿಯಲ್ಲೂ ನಮಗೆ ಒಳ್ಳೆಯ ಅಭ್ಯರ್ಥಿಗಳು ಇದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರು ಗೆಲುವು ಸಾಧಿಸುತ್ತಾರೆ ಎಂದರು.
ಬಿಜೆಪಿ ಕೆಲ ಶಾಸಕರು ಸಚಿವರು ನನಗೆ ಕರೆ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿಕೆ ವಿಚಾರವಾಗಿ ಮಾತನಾಡಿದ ಅಶ್ವಥ ನಾರಾಯಣ, ಅವರ ಪಕ್ಷದಲ್ಲಿ ಇರುವವರು ಅಲ್ಲೇ ಇದ್ದರೆ ಹೆಚ್ಚು, ಆ ಪಕ್ಷದ ಶಾಸಕರಿಗಾಗಲಿ, ಆಕಾಂಕ್ಷಿಗಳಿಗಾಗಲಿ, ಅಭ್ಯರ್ಥಿಗಳಿಗಾಗಲಿ ಯಾರಿಗೂ ಭರವಸೆ, ವಿಶ್ವಾಸವಿಲ್ಲ. ಯಾವ ಕಾರಣದಿಂದಲೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ, ಜನರ ಬೆಂಬಲವೂ ಅವರಿಗೆ ಇಲ್ಲ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ ಪಕ್ಷಕ್ಕೆ ಈಗಿರುವ ಸಂಖ್ಯೆಯು ಬರುವುದಿಲ್ಲ, ಇನ್ನೂ ಕಡಿಮೆ ಸ್ಥಾನದೊಂದಿಗೆ ಚುನಾವಣೆ ಮುಗಿಸಲಿದ್ದಾರೆ ಎಂದರು.