ಹಾಸನ: ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ ರಾಮಸ್ವಾಮಿ ಶುಕ್ರವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿದ್ದ ಎ.ಟಿ. ರಾಮಸ್ವಾಮಿ ಅವರು ಹಲವು ತಿಂಗಳಿಂದ ಜೆಡಿಎಸ್‌ನಿಂದ ದೂರವಿದ್ದರು. ಇದೀಗ ಶುಕ್ರವಾರ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಎ.ಟಿ ರಾಮಸ್ವಾಮಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷದಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್‌ಗೆ ಧನ್ಯವಾದ ಹೇಳುತ್ತೇನೆ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ಉತ್ತಮ ಕೆಲಸಗಳನ್ನ ಮಾಡಿದ್ದೇನೆ. ನಾನು ಸರಿ ಇದ್ರೆ ಸರಿ, ತಪ್ಪಾಗಿದ್ದರೇ ತಪ್ಪು ಅಂತಾ ಹೇಳುತ್ತೇನೆ. ನಾನು ಜೆಡಿಎಸ್ ಬಿಟ್ಟೆ ಎಂದು ಎಲ್ಲೂ ಹೇಳಿಲ್ಲ. ಜೆಡಿಎಸ್ ನವರೆ ನನ್ನನ್ನು ಹೊರ ಹಾಕಿದ್ರು. ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದ್ದೇ ನನಗೆ ಮುಳುವಾಯಿತು ಎಂದು ಎ.ಟಿ ರಾಮಸ್ವಾಮಿ ತಿಳಿಸಿದರು. ೧೯೮೯, ೧೯೯೪ರಲ್ಲಿ ಕಾಂಗ್ರೆಸ್ ನಿಂದ ಹಾಗು ೨೦೦೪ ಮತ್ತು ೨೦೧೮ರಲ್ಲಿ ಜೆಡಿಎಸ್‌ನಿಂದ ವಿಧಾನಸಭೆ ಪ್ರವೇಶ ಮಾಡಿದ್ದರು.