ಬೇಲೂರು: ಅಂಬೇಡ್ಕರ್ ಕೊಡುಗೆಯ ಸಂವಿಧಾನದ ಅಡಿಯಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಇಂದು ದೇಶದ ಅಧಿಕಾರ ಹಿಡಿಯುವಂತಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತಿಯ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ಅಂಬೇಡ್ಕರ್ ನೀಡಿದ ಸಂವಿಧಾನದ ಅಡಿಯಲ್ಲಿ ಒಬ್ಬ ಚಹಾ ಮಾರುತ್ತಿದ್ದ ಯುವಕ ಇಂದು ನರೇಂದ್ರ ಮೋದಿಯಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ. ಪವಿತ್ರ ನಾಡಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹುಟ್ಟಿದ್ದೆ ನಮ್ಮೆಲ್ಲರ ಭಾಗ್ಯ. ಅದರಲ್ಲೂ ಅವರು ನೀಡಿದಂತಹ ಸಂವಿಧಾನ ದೇಶದ ಕಟ್ಟೆ ಕಡೆಯ ಪ್ರಜೆಗೂ ಸಮಾನತೆ ನೀಡುವಂತಿದೆ ಯಾವುದೇ ಜಾತಿಭೇದ ವರ್ಗಕ್ಕೆ ಸೀಮಿತವಾಗದೆ ದೇಶದಲ್ಲಿ ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇವರ ಅನುಯಾಯಿಗಳಾದ ಇಂದು ದೇಶ ಕಂಡ ನರೇಂದ್ರ ಮೋದಿಯವರು ಉನ್ನತ ಸ್ಥಾನ ಏರಲು ಸಾಧ್ಯವಾಯಿತು.
ಕಳೆದ 70 ವರ್ಷಗಳಿಂದ ಆಳ್ವಿಕೆ ಮಾಡಿದ ಸರ್ಕಾರಗಳು ತಮ್ಮ ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಬಲಿ ಕೊಡುವ ಮಟ್ಟಕ್ಕೆ ಮುಂದಾಗಿದ್ದರು. ಆದರೆ ಇತ್ತೀಚಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ನನಸಾಗಿ ಮಾಡುತ್ತಿರುವುದನ್ನು ಕಂಡು ಸಹಿಸದ ವಿರೋಧ ಪಕ್ಷಗಳು, ಒಂದಲ್ಲ ಒಂದು ದೇಶದಲ್ಲಿ ಕಲಹ ಸೃಷ್ಟಿಸಿ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಅವರ ಈ ದೇಶದ ಪ್ರಜೆಗಳೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ನಂತರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ನಮ್ಮ ದೇಶವನ್ನು ಆಳ್ವಿಕೆ ಮಾಡುವ ಯಾವುದೇ ಸರ್ಕಾರವಾಗಲಿ, ಈ ದೇಶದ ಸಂವಿಧಾನಕ್ಕೆ ಗೌರವ ತಂದುಕೊಡುವ ಕೆಲಸ ಮಾಡಬೇಕು 132ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಮಾಡುವಂತಹ ವಾಡಿಕೆ ಅನುಸರಿಸಲಾಗಿತ್ತು ಆದರೆ ಚುನಾವಣೆ ಸಂದರ್ಭ ಆದಕಾರಣ ಸಾಂಕೇತಿಕವಾಗಿ ಮಾಲಾರ್ಪಣೆ ಮಾಡುವ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಸಂಚಾಲಕ ರೇಣು ಕುಮಾರ್, ಪುರಸಭಾ ನಾಮಿನಿ ಸದಸ್ಯ ಮಂಜುನಾಥ್, ಬಿಜೆಪಿ ನಗರ ಘಟಕ ಅಧ್ಯಕ್ಷ ವಿನಯ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಶೇಖರಯ್ಯ, ಹಾಗೂ ಬಿಜೆಪಿ ಮುಖಂಡರಾದ ಕರುಣ ಶೇಖರ್, ಪ್ರಭಾಕರ, ಶರತ್ ಮುಂತಾದವರು ಹಾಜರಿದ್ದರು.