ಹಾಸನ: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹತ್ತು ವರ್ಷದಿಂದ ಆಲೂರು ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು ಬಿಜೆಪಿ ಪಕ್ಷದಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ನಂತರ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಕಳೆದ ಬಾರಿ ಸ್ಪರ್ಧೆ ಮಾಡಿದ್ದಂತಹ ಸಿದ್ದಯ್ಯ ಅವರೊಂದಿಗೆ ಚುನಾವಣೆ ಪ್ರಚಾರದಲ್ಲಿ ಸಹಕರಿಸಿದ್ದೇನೆ ಎಂದರು.
ಹಲವು ವರ್ಷಗಳಿಂದ ಮಲೆನಾಡು ಪ್ರದೇಶವಾದ ಸಕಲೇಶಪುರದಲ್ಲಿ ಜನಸಾಮಾನ್ಯರ ನೋವು ನಲಿವಿಗೆ ಸ್ಪಂದಿಸಿದ್ದು, ಕೊರೋನ ಹಾವಳಿ ಸಂದರ್ಭದಲ್ಲಿ ಬಡ ಹಾಗೂ ಮಾಧ್ಯಮ ವರ್ಗದ ಜನರಿಗೆ ಸಹಾಯ ಹಸ್ತ ಚಾಚಿದ್ದೇನೆ ಎಂದರು. ಸ್ಥಳಿಯರನ್ನು ಕಡೆಗಣಿಸಿ ಕ್ಷೇತ್ರದ ಹೊರಗಡೆಯವರಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪ ಸರಿಯಲ್ಲ. ನನ್ನ ಪತ್ನಿ ಸಕಲೇಶಪುರದವರೇ ಆಗಿದ್ದು, ಹಲವು ವರ್ಷಗಳಿಂದ ಇಲ್ಲೇ ನೆಲೆಸಿದ್ದೇನೆ ಹಾಗೂ ಜಾತಿ ದೃಢೀಕರಣ ಪತ್ರದಲ್ಲಿಯೂ ಯಾವುದೇ ಅಕ್ರಮ ನಡೆದಿಲ್ಲ. ಈ ಎಲ್ಲಾ ವಿಷಯವನ್ನು ಪರಿಶೀಲಿಸಿ ಹೈಕಮಾಂಡ್ ನನಗೆ ಬಿ ಫಾರಂ ನೀಡಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ನನ್ನ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆ. ನಾನು ಪ್ರಾಮಾಣಿಕವಾಗಿ ಇರುವುದರಿಂದಲೇ ನನಗೆ ಪಕ್ಷದಿಂದ ಟಿಕೆಟ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆಗಳು ಇದ್ದು ಪ್ರಮುಖವಾಗಿ ಆನೆ ಹಾವಳಿ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕಿದ್ದು, ಮುಂದಿನ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿದ್ದಲ್ಲಿ ಅವರ ಸೇವೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುರಳಿ ಮೋಹನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ದೇವರಾಜೇಗೌಡ, ಅಬ್ದುಲ್ ಸಮ್ಮದ್, ಬೈರಮುಡಿ ಚಂದ್ರು, ಮಲ್ಲಿಗೆವಾಳು ದ್ಯಾವಪ್ಪ, ಶಿವಮೂರ್ತಿ, ಹೆಮ್ಮಿಗೆ ಮೋಹನ ಇದ್ದರು.