ಹಾಸನ: ಸ್ಥಳೀಯ ಶಾಸಕರ ಹಿಂಬಾಲಕರು ಎಚ್. ಡಿ. ದೇವೇಗೌಡ ನಗರದ ಬಿಜೆಪಿ ಬೆಂಬಲಿತ ನಿವಾಸಿಗಳಿಗೆ ಮಾತ್ರ ಇ-ಖಾತೆ ಮಾಡಿಸಿಕೊಡುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೯೮- ೯೯ರಲ್ಲಿ ಎಚ್.ಡಿ ದೇವೇಗೌಡ ನಗರದಲ್ಲಿ ೮೦೭ ಮನೆಗಳ ನಿರ್ಮಾಣ ಮಾಡಲಾಗಿತ್ತು. ೨೦೦೧ರಲ್ಲಿ ಎಸ್.ಎಂ ಕೃಷ್ಣ ನಗರದಲ್ಲಿ ೫೩೭ ಮನೆಗಳನ್ನು ನಿರ್ಮಿಸಿ ಫಲಾನುಭವಗಳಿಗೆ ಅಂದಿನ ಸರ್ಕಾರ ಹಕ್ಕುಪತ್ರವನ್ನು ನಗರಸಭೆ ವತಿಯಿಂದ ನೀಡಿದೆ ಹಾಗೂ ತಲಾ ೨೫ ಸಾವಿರ ರೂ. ಗಳಿಗೆ ನಗರಸಭೆ ಅಡಮಾನವಾಗಿರುತ್ತದೆ.
ನಂತರ ೨೦೧೩ರಲ್ಲಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಆಶ್ರಯ ಯೋಜನೆ ಅಡಿ ನಿರ್ಮಿಸಲಾದ ಮನೆಗಳ ಮೇಲಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದೆ. ಇದೀಗ ದೇವೇಗೌಡ ನಗರದ ನಿವಾಸಿಗಳಿಗೆ ಶಾಸಕರ ಹಿಂಬಾಲಕರಾದ ಲೋಕಿ ಮತ್ತವರ ತಂಡ ತಟ್ಟೇಕೆರೆ ಗ್ರಾಮ ಪಂಚಾಯಿತಿಯಲ್ಲಿ ದಿನಕ್ಕೆ ನೂರಾರು ಇ-ಸ್ವತ್ತುಗಳನ್ನು ಕೊಡಿಸುತ್ತಿದ್ದಾರೆ.
ಇವರುಗಳೇ ಮನೆ ಮನೆಗೆ ತೆರಳಿ ಇ-ಸ್ವತ್ತು ದಾಖಲೆಗಳನ್ನು ಪಡೆದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ಹಗಲು ರಾತ್ರಿ ಅಧಿಕಾರಿಗಳಿಗೆ ಒತ್ತಡ ಹಾಕುತ್ತಾ ಇ-ಸ್ವತ್ತು ಮಾಡಿ ಮನೆ ಮನೆಗೆ ಹಂಚುತ್ತಿದ್ದಾರೆಂದು ದೂರಿದ ಅವರು ಶಾಸಕರು ಮತ್ತವರ ಹಿಂಬಾಲಕರ ಮೂಲಕ ಇಂತಹ ಕಾರ್ಯ ನಡೆಸುತ್ತಿದ್ದಾರೆಂದು ಕಿಡಿ ಕಾರಿದರು.
ಬಿಜೆಪಿ ಬೆಂಬಲಿತ ನಿವಾಸಿಗಳಿಗೆ ಸ್ಥಳೀಯ ಪಿಡಿಒಗಳ ಮೂಲಕ ಬೆಳಗ್ಗೆ ೮ ರಿಂದ ರಾತ್ರಿ ೮ ಗಂಟೆವರೆಗೂ ಇದ್ದು ಇ-ಖಾತೆ ಮಾಡಿಸಿ ಮನೆಮನೆಗೆ ಹಂಚುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ, ಧಮ್ಕಿ ಹಾಕಿ ಹಗಲು ರಾತ್ರಿ ತಮ್ಮ ಬೆಂಬಲಿಗರ ಇ-ಸ್ವತ್ತುಗಳನ್ನು ಕೊಡಿಸಲಾಗುತ್ತಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸೂಚಿಸುವವರಿಗೆ ಇ-ಸ್ವತ್ತು ದೊರೆಯದಂತೆ ತಡೆಯಲಾಗುತ್ತಿದೆ ಎಂದು ದೂರಿದ ಅವರು ಈ ಮೂಲಕ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಬೆಂಬಲಿಗರು ಈ ರೀತಿ ದಬ್ಬಾಳಿಕೆ ಮಾಡುವ ಮೂಲಕ ರಾಜಕೀಯ ವ್ಯಭಿಚಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಿಂದ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ಸ್ಪರ್ಧೆಗೆ ಟಿಕೆಟ್ ದೊರೆಯುವ ವಿಶ್ವಾಸವಿದ್ದು ಜನರ ಸೇವೆ ಮಾಡಲು ಅವಕಾಶ ಸಿಗುವ ನಿರೀಕ್ಷೆ ಹೊಂದಿದ್ದೇನೆ ಎಂದು ರಂಗಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಸ್ವಾಮಿ, ಮಂಜಣ್ಣ, ಮಹೇಂದ್ರ, ರಘು ,ಗಣೇಶ್, ಶ್ರೀನಿವಾಸ್ ಇದ್ದರು.
ಬಿಜೆಪಿ-ಜೆಡಿಎಸ್ ನಡುವೆ ತಮಗೆ ಮತದಾರರ ಅಪಾರ ಬೆಂಬಲ ನಿರೀಕ್ಷೆ-ಬನವಾಸೆ ರಂಗಸ್ವಾಮಿ
ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಿ ರಾಜಕಾರಣ ಮಾಡಲು ಮುಂದಾಗುತ್ತಿದ್ದಾರೆ. ಈ ಇಬ್ಬರ ನಡುವೆ ಕಾಂಗ್ರೆಸ್‌ನಿಂದ ನಾನು ಶುದ್ಧ ಹಸ್ತನಾಗಿ, ಎಲ್ಲರಿಗೆ, ಎಲ್ಲಾ ಕಾಲದಲ್ಲಿ ದೊರೆಯುವ ಸೇವಕನಾಗಿ ಕೆಲಸ ಮಾಡುವುದರಿಂದ ಹಾಸನ ವಿಧಾನಸಭಾ ಕ್ಷೇತ್ರದ ಮತದಾರರು ತನ್ನ ಪರವಾಗಿ ಬೆಂಬಲ ನೀಡಲಿದ್ದಾರೆಂದು ಬನವಾಸೆ ರಂಗಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.