ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿತಂ ಗೌಡ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಕೆ. ಸುರೇಶ ಚುನಾವಣಾ ಪೂರ್ವ ಮತದಾರರಿಗೆ ಆಮಿಷ ಒಡ್ಡುವ ಮೂಲಕ ಮತ ಪಡೆಯುವ ಅನೈತಿಕ ಕೃತ್ಯವನ್ನು ಎಸೆಗುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರಿಯ ಸಮಿತಿ ಪಕ್ಷದ ವಿ. ರಮೇಶ್ ಭುವನಹಳ್ಳಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮಾರ್ಚ್ ೬ರಂದು ಸತ್ಯಮಂಗಲ ಬಡಾವಣೆಯ ಚಿರಂತನ ಶಾಲೆಯ ಮೈದಾನದಲ್ಲಿ ಪರಿವರ್ತನಾ ಟ್ರಸ್ಟ್ ಹೆಸರಿನಲ್ಲಿ ಅಷ್ಟಲಕ್ಷ್ಮಿ ಪೂಜೆಯನ್ನು ಏರ್ಪಡಿಸಲಾಗಿದ್ದು ಶಾಸಕ ಪ್ರೀತಂಗೌಡ ನೂರಾರು ಮಹಿಳೆಯರಿಗೆ ಪೂಜೆಯ ನೆಪದಲ್ಲಿ ಸೀರೆ, ಕುಪ್ಪಸ, ಬೆಳ್ಳಿಯ ಲಕ್ಷ್ಮಿ ಪೆಂಡೆಂಟ್ ಇತ್ಯಾದಿಗಳನ್ನು ನೀಡಿ ಆಮೀಷ ಒಡ್ಡುತ್ತಿದ್ದಾರೆ ಎಂದು ದೂರಿದರು.
ಫೆ.೯ರಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸಲು ಸಹಕಾರ ನೀಡುವಂತೆ ಹಾಸನದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದ್ದರು. ಆದರೂ ಸಹ ಇಂತಹ ಚಟುವಟಿಕೆ ಮುಂದುವರೆಯುತ್ತಿರುವುದು ಖಂಡನೀಯ ಎಂದರು.
ಅಲ್ಲದೇ ಬೇಲೂರು ತಾಲೂಕಿನ ಬಾರಿಯ ಮೇಲೆ ಬಿಜೆಪಿ ಜಿಲ್ಲೆ ಘಟಕದ ಅಧ್ಯಕ್ಷ ಎಚ್. ಕೆ. ಸುರೇಶ ಅವರು ಜನರಿಗೆ ಬಾಡೂಟ ಹಾಕಿದ್ದಾರೆ. ಅಲ್ಲದೆ ಮದ್ಯ ಕುಡಿಸಿ ಜನರನ್ನು ಹಾಳು ಮಾಡಿದ್ದು, ಈ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿದೆ. ಇದು ಗಂಭೀರ ವಿಷಯವಾಗಿದ್ದು ಇಂತಹ ಕೃತ್ಯಗಳನ್ನು ಎಸಗುವ ಅಭ್ಯರ್ಥಿಗಳು ಅಪರಾಧಿಗಳೇ ಆಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸೂಕ್ತ ಕ್ರಮ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಪರಿವರ್ತನಾ ಟ್ರಸ್ಟ್ ಹೆಸರಿನಲ್ಲಿ ಶಾಸಕರು ಮತದಾರರಿಗೆ ಉಡುಗೊರೆಯನ್ನು ನೀಡಿದ್ದು, ಈ ಟ್ರಸ್ಟ್ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ವಸ್ತುಗಳನ್ನು ಉಚಿತವಾಗಿ ನೀಡಲು ಹಣದ ಮೂಲ ಬಗ್ಗೆಯೂ ತನಿಖೆ ಆಗಬೇಕು. ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವರಾಜು, ಆನಂದ್, ರಘು, ಗೌಡ, ಮಧು ಇದ್ದರು.