ಹಾಸನ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾ. ೨೫ರಂದು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ವಿಭಾಗದ ಐಕ್ಯತಾ ಸಮಾವೇಶ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಸ್ವಾಭಿಮಾನ ಭವನದ ಮುಂಬಾಗ ಬೆಳಗ್ಗೆ 11 ಗಂಟೆಗೆ ಸಮಾವೇಶ ಜರುಗಲಿದ್ದು, ಪರಿಶಿಷ್ಟ ಜಾತಿ ವಿಭಾಗದ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಆರ್. ಧರ್ಮ ಸೇನಾ ಉದ್ಘಾಟನೆ ನೆರವೇರಿಸಲಿದ್ದಾರೆ. ಎಐಸಿಸಿ ಸದಸ್ಯರು ಹಾಗೂ ಮಾಜಿ ಸಚಿವ ಬಿ. ಶಿವರಾಂ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದು, ದಿವಂಗತ ಆರ್. ಧ್ರುವನಾರಾಯಣ ಭಾವಚಿತ್ರಕ್ಕೆ ಸಂಸದ ಡಿ.ಕೆ ಸುರೇಶ ಪುಷ್ಪಾರ್ಚನೆ ಮಾಡಲಿದ್ದಾರೆ. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಈ. ಎಚ್ ಲಕ್ಷ್ಮಣ ನುಡಿ ನಮನ ಸಲ್ಲಿಸಲಿದ್ದು, ಪರಿಶಿಷ್ಟ ಜಾತಿ ವಿಭಾಗದ ಮಾಜಿ ಅಧ್ಯಕ್ಷ ಡಾ.ಮುನಿಸ್ವಾಮಿ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ ಜವರೇಗೌಡ, ಸಂಯೋಜಕ ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದೇವರಾಜೇಗೌಡ, ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ, ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಎಚ್.ಆಂಜನೇಯ ಸೇರಿದಂತೆ ರಾಜ್ಯದ ಹಲವು ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶೇಖರಪ್ಪ, ಚಂದ್ರಶೇಖರ, ಅಬ್ದುಲ್ ಖಯ್ಯಮ್, ಶಂಕರ ರಾಜ್, ಕುಮಾರಸ್ವಾಮಿ ಇದ್ದರು.