ಆಲೂರು: ಬಡವರು, ರೈತರ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಜಿಲ್ಲೆಯಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕರೆ ನೀಡಿದರು.
ಜಿಲ್ಲೆಯ ಆಲೂರಿನಲ್ಲಿ ಪ್ರಜಾಧ್ವನಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪ್ರಧಾನಿ ಹುದ್ದೆ ಅಲಂಕರಿಸಲು ಕಾಂಗ್ರೆಸ್ ಸಹಕಾರ ನೀಡಿತು ಎಂದು ನೆನಪಿಸಿದರು. ಪ್ರತಿಯೊಬ್ಬರಿಗೂ ಅನ್ನ ಭಾಗ್ಯದ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರ ದಿನನಿತ್ಯದ ಆಹಾರದ ಕೊರತೆಯನ್ನು ನೀಗಿಸಿದ ಕಾಂಗ್ರೆಸ್ ಪಕ್ಷ ಉತ್ತಮ ಆಡಳಿತವನ್ನು ನೀಡಿದೆ.
ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸುವ ಸಲುವಾಗಿ ಎಲ್ಲರೂ ಹೋರಾಟ ಮಾಡಬೇಕು ಇತಿಹಾಸ ಸೃಷ್ಟಿಸಬೇಕಿದೆ ಎಂದರು. ಸಕಲೇಶಪುರ -ಆಲೂರು ವಿಧಾನಸಭಾ ಕ್ಷೇತ್ರದಲ್ಲಿ ಮುರಳಿ ಮೋಹನ, ಸಣ್ಣ ಸ್ವಾಮಿ, ಡಿ.ಮಲ್ಲೇಶ, ಭುವನಾಕ್ಷಿ ನಾಲ್ಕು ಮಂದಿ ಅರ್ಜಿಯನ್ನು ಸಲ್ಲಿಸಿದ್ದು ಇವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಕ್ಷೇತ್ರದ ಜನ ಮತ ನೀಡಬೇಕು ಕಾಂಗ್ರೆಸ್‌ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭಕ್ಕೂ ಮುನ್ನ ಪ್ರಜಾಧ್ವನಿ ಯಾತ್ರೆಯ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು. ಡಿ.ಕೆ ಶಿವಕುಮಾರ ಹಾಗೂ ತಂಡ ನೂರಾರು ಮಂದಿ ಬೆಂಬಲಿಗರೊಂದಿಗೆ ಸಾಗಿದರು. ಅಭಿಮಾನಿಗಳು ಡಿ.ಕೆ ಶಿವಕುಮಾರ ಅವರಿಗೆ ಸೇಬಿನ ಹಾರ ಹಾಗೂ ಪುಷ್ಪಾರ್ಚನೆಯೊಂದಿಗೆ ಅದ್ದೂರಿ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ, ಸಂಸದ ಡಿ. ಕೆ. ಸುರೇಶ, ರಾಜ್ಯಸಭೆ ಸದಸ್ಯ ಜಿ. ಸಿ. ಚಂದ್ರಶೇಖರ, ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ಮೋಟಮ್ಮ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ, ಡಿಸಿಸಿ ಅಧ್ಯಕ್ಷ ಲಕ್ಷ್ಮಣ, ಮುಖಂ ಚಂದ್ರಶೇಖರ, ಮುರಳಿ ಮೋಹನ, ಸಣ್ಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.