ಬೇಲೂರು: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಚುನಾವಣೆ ಪ್ರಚಾರಕ್ಕೆ ಹಾಸನಕ್ಕೆ ಬರಲಿದ್ದು, ಅತಿ ಶೀಘ್ರವೇ ಪ್ರಧಾನಿ ಮೋದಿ ಆಗಮನಕ್ಕೆ ಹಾಸನ, ಬೇಲೂರು, ಸಕಲೇಶಪುರ ನಡುವೆ ದೊಡ್ಡ ಸಭಾ ಮಂಟಪದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಬೇಲೂರು ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ ಹೇಳಿದರು.
ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಮೋದಿಯವರು ಈಗಾಗಲೇ ಬೇಲೂರು ಚನ್ನಕೇಶವಸ್ವಾಮಿ ದೇಗುಲವನ್ನು ಸ್ಮರಿಸಿದ್ದಾರೆ. ಮುಂದಿನ ದಿನದಂದು ಬೇಲೂರು ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ ಎಂದ ಅವರು, ಬೇಲೂರು ವಿಶ್ವ ವಿಖ್ಯಾತವಾದ ಕ್ಷೇತ್ರ, ವಿಶೇಷವಾಗಿ ಪ್ರವಾಸಿ ತಾಣ, ಆದರೆ ರಾಜ್ಯದ 224 ಕ್ಷೇತ್ರದಲ್ಲಿ ಬೇಲೂರು ಕ್ಷೇತ್ರ ಅತ್ಯಂತ ಹಿಂದುಳಿದಿದೆ ಎಂದು ಹೇಳಲು ನಮಗೆ ನಿಜಕ್ಕೂ ನೋವು ತಂದಿದೆ. ನಾನು ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ. ಇಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿ ಜಾತಿ, ಧರ್ಮದ ನಡುವೆ ಬಿರುಕು ಉಂಟು ಮಾಡುವ ಹುನ್ನಾರ ನಡೆಸುತ್ತಾರೆ. ಯಾರು ಕೂಡ ಇಂತಹ ತಂತ್ರಕ್ಕೆ ಬಲಿಯಾಗಬೇಡಿ. ಕಳೆದ ಐದು ವರ್ಷದಲ್ಲಿ ಬಿಜೆಪಿ ಸರ್ಕಾರ ಬೇಲೂರಿಗೆ ರೂ 1800 ಕೋಟಿ ಹಣ ನೀಡಿದ್ದಾರೆ. ಆದರೆ ಅಭಿವೃದ್ಧಿ ಕಾಣುತ್ತಿಲ್ಲ, ನಾವು ಏಪ್ರಿಲ್ 19 ಅಥವಾ 20ರಂದು ನಾಮಪತ್ರವನ್ನು ಅದ್ದೂರಿಯಾಗಿ ಸಲ್ಲಿಸುತ್ತೇವೆ. ಅಂದು ಬಿಜೆಪಿ ಯುವ ನಾಯಕ ಬಿ.ವೈ ವಿಜಯೇಂದ್ರರವರು ಆಗಮಿಸಲಿದ್ದಾರೆ ಎಂದರು.
ದೆಹಲಿ ದಕ್ಷಿಣ ಲೋಕಸಭಾ ಸದಸ್ಯ ರಮೇಶ್ ಬಿದೂರಿ ಮಾತನಾಡಿ, ನಿಮ್ಮ ಮತ ಒಂದು ಕೂಡ ವ್ಯರ್ಥವಾಗಬಾರದು, ಕಾರಣ ಒಂದೊಂದು ಮತಗಳು ದೇಶವನ್ನು ಕಟ್ಟುವ ಮತ್ತು ಭಾರತವನ್ನು ವಿಶ್ವ ಗುರುವಾಗಿ ನಿರ್ಮಾಣ ಮಾಡಲು ನಿಮ್ಮ ಮತ ಮುನ್ನುಡಿ ಬರೆಯಬೇಕು. ಕಾಂಗ್ರೆಸ್ ದೇಶದಲ್ಲಿ ವಂಶ ಪಾರಂಪರ್ಯವಾಗಿ ಆಡಳಿತ ನಡೆಸುತ್ತಾ ದೇಶವನ್ನು ಲೂಟಿ ಮಾಡುತ್ತಿದೆ. 65 ವರ್ಷ ದೇಶವನ್ನು ಕಾಂಗ್ರೆಸ್ ಆಳಿದರೂ ದೇಶದಲ್ಲಿ ಇನ್ನೂ ಬಡತನ ತಾಂಡವ ನೃತ್ಯ ಮಾಡುತ್ತಿದೆ. ಕಾಂಗ್ರೆಸ್ ಮುಖಂಡರು ವಿದೇಶದಲ್ಲಿ ಹಣ ಇಟ್ಟಿದ್ದಾರೆ. ನಾವು ಮೋದಿ ಸರ್ಕಾರ ಮತ್ತು ಬಸವರಾಜು ಬೊಮ್ಮಾಯಿ ಅವರ ಕೈ ಬಲಪಡಿಸಬೇಕಿದೆ.
ಹಾಸನ ಜಿಲ್ಲಾ ಬಿಜೆಪಿ ಚುನಾವಣೆ ಸಂಚಾಲಕ ರೇಣು ಕುಮಾರ್ ಮಾತನಾಡಿ, 60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದರೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ಪಕ್ಷದಿಂದ ನಾವುಗಳು ಪಾಠ ಕಲಿಯುವ ಅಗತ್ಯವಿಲ್ಲ. ಇನ್ನೂ ಜೆಡಿಎಸ್ ಪಕ್ಷದ ಬಗ್ಗೆ ರಾಜ್ಯದಲ್ಲಿ ಯಾವ ಸ್ಥಿತಿ ಬಂದಿದೆ ಎಂದು ನೋಡಬೇಕಿದೆ. ಯಾವ ಪಕ್ಷ ಸದೃಢವಾಗಿರುತ್ತದೆ ಆ ಪಕ್ಷದಲ್ಲಿ ಆಕಾಂಕ್ಷಿಗಳ ಆಯ್ಕೆ ಜೋರಾಗಿರುತ್ತದೆ. ಅಂತೆಯೇ ನಮ್ಮಲ್ಲಿ ಕೂಡ ಹುಲ್ಲಹಳ್ಳಿ ಸುರೇಶ, ಕೊರಟಿಕೆರೆ ಪ್ರಕಾಶ, ಸಿದ್ದೇಶ ನಾಗೇಂದ್ರ, ಸಂತೋಷ ಕೆಂಚಾಂಬ ಮತ್ತು ಸುರಭಿ ರಘು ಅವರಿಂದ ಅಭ್ಯರ್ಥಿ ಸ್ಥಾನಕ್ಕೆ ಪೈಪೋಟಿ ನಡೆದಿದ್ದು ಸಹಜವಾಗಿದೆ. ಆದರೆ ವರಿಷ್ಠರು ಅಂತಿಮವಾಗಿ ಹುಲ್ಲಹಳ್ಳಿ ಸುರೇಶ ಅವರಿಗೆ ಬೇಲೂರು ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ನೀಡಿದೆ. ಎಲ್ಲರೂ ಕೂಡ ಒಟ್ಟಾಗಿ ಸೇರಿ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ರವರನ್ನು ವಿಧಾನಸಭೆಗೆ ಕಳಿಸಬೇಕಿದೆ ಎಂದ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಸಾದ್ಯವೇ? ಎಂದು ಪ್ರಶ್ನಿಸಿದರು. ನಮಗೆ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಎಲ್ಲರೂ ತಿಳಿದು ಯಾವುದೇ ಭಿನ್ನಮತವಿಲ್ಲದೆ ಕೆಲಸ ಮಾಡಬೇಕು ಎಂದರು.
ಬಿಜೆಪಿ ಮುಖಂಡರಾದ ಸಂತೋಷ ಕೆಂಚಾಂಬ, ಮೈ.ಬಿ. ರವಿಶಂಕರ್ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಅಡಗೂರು ಆನಂದ, ಚುನಾವಣೆ ಉಸ್ತುವಾರಿ ಮೈ.ಬಿ ರವಿ ಶಂಕರ್, ಪುರಸಭಾ ಸದಸ್ಯ ಪ್ರಭಾಕರ್, ಬಿಜೆಪಿ ಮುಖಂಡ ಪವರ್ತಯ್ಯ, ಶೇಖರಯ್ಯ, ಬಿ.ಕೆ ಚಂದ್ರಕಲಾ, ಅಡಗೂರು ಬಸವರಾಜು, ದಿನೇಶ್, ಶೋಭ ಗಣೇಶ, ರಮೇಶ, ರೇಣುಕಾ ಪ್ರಸಾದ, ಇಲಿಯಾಸ್ ಖಾನ್, ಸಂಪತ್ತು, ಸುಮನ್, ವಸಂತ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಜರಿದ್ದರು.