ಹೊಳೆನರಸೀಪುರ: ಹಳ್ಳಿಮೈಸೂರು ಹೋಬಳಿ ಮತ್ತಷ್ಟು ಅಭಿವೃದ್ಧಿಗೆ ನಿಮ್ಮಗಳ ಬೆಂಬಲ ಬೇಕಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಕಾರ್ಯಕರ್ತರಲ್ಲಿ ಕೋರಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿ ಕಾರ್ಯಕರ್ತರ ಸಭೆಯನ್ನು ಮಾಕಬಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿ ಮಾತನಾಡಿದ ಅವರು, ನಾನೇನು ಯಾರಿಗೂ ದ್ರೋಹ ಮಾಡಿಲ್ಲ. ರಾಜಕೀಯ ಬೆಳವಣಿಗೆ ನಿಮಗೆ ಗೊತ್ತಿದೆ. ಈ ಬಾರಿ ಮಾಜಿ ಸಚಿವ ಎ. ಮಂಜುವನ್ನು ಆಶೀರ್ವದಿಸಿ ಎಂದರು.
ಹೇಮಾವತಿ ಬಲದಂಡೆ ನಾಲೆ ಆಧುನೀಕರಣಕ್ಕಾಗಿ ೪೬೦ ಕೋಟಿ ರೂ. ಅನುದಾನ ಕೊಟ್ಟಿದ್ದೇವೆ. ರಂಗೇನಹಳ್ಳಿ ಏತನೀರಾವರಿ ಪ್ರಗತಿಯಲ್ಲಿದೆ. ಬರಗಾಲ ಪೀಡಿತ ಪ್ರದೇಶ ಎಂದಿದ್ದ ಈ ಭಾಗವನ್ನು ಹಸಿರು ನೆಲವನ್ನಾಗಿಸಲು ಸಾಕಷ್ಟು ಕಾರ್ಯಕ್ರಮ ನೀಡಿದ್ದೇವೆ. ಅಷ್ಟೇ ಮುಖ್ಯವಾಗಿ ದೇವೇಗೌಡರ ಕುಟುಂಬಕ್ಕೆ ರಾಜಕೀಯವಾಗಿ ನಿರಂತರ ಶಕ್ತಿ ತುಂಬಿದ್ದೀರಿ ಎಂದು ಸ್ಮರಿಸಿದರು.
ಕಾರ್ಯಕರ್ತನೊಬ್ಬ ಮಾಕಬಳ್ಳಿ ಗ್ರಾಮಕ್ಕೆ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಕ್ಕೆ, ಮಾಕಬಳ್ಳಿ ಗ್ರಾಮದ ರಸ್ತೆ, ನೀರಾವರಿ ಅನುಕೂಲತೆ ಮಾಡಿದ್ದೇವೆ ಎಂದು ಉತ್ತರಿಸಿದರು. ಆದರೆ ಬಂಡಿಶೆಟ್ಟಿಹಳ್ಳಿ, ಕೆರಗೋಡು ಮಾರ್ಗದ ರಸ್ತೆ ದುರಸ್ಥೀಕರಣ ವಿಚಾರ ಎತ್ತಿದ ಕಾರ್ಯಕರ್ತನೊಬ್ಬನ ಮೇಲೆ ಆಕ್ರೋಶಗೊಂಡ ರೇವಣ್ಣ, ಕೆಲವರು ಸಭೆಯ ಗಾಂಭೀರ್‍ಯತೆಯನ್ನು ಹಾಳುಮಾಡಲೆಂದೇ ಕೆಲವರ ಅಣತಿಯಂತೆ ಬಂದಿರುತ್ತೀರಿ ಎಂದು ಸಿಟ್ಟಾದರು.
ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಎ.ಮಂಜು ರಾಷ್ಟ್ರೀಯ ಪಕ್ಷಗಳೆರಡೂ ದೇಶದಲ್ಲಿ ಸಾಕಷ್ಟು ಪ್ರಸಂಗಗಳಿಗೆ ದಾರಿ ಮಾಡಿಕೊಟ್ಟಿವೆ. ಇದರಿಂದಲೇ ಪ್ರಾದೇಶಿಕ ಪಕ್ಷದ ಪ್ರಾಧಾನ್ಯತೆ ಜನರಿಗೆ ಅರ್ಥವಾಗಿದೆ ಎಂದರು.
ರಾಹುಲ್‌ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಾವ ಪಕ್ಷವೇ ಆಗಲಿ, ರಾಜಕೀಯ ನಾಯಕನೊಬ್ಬನ ಹಣಿಯಲೆತ್ನಿಸುವಂತದ್ದು ತರವಲ್ಲ ಎಂದರು. ಪುತ್ರ ಮಥರ್‌ಗೌಡ ಜೆಡಿಎಸ್‌ನಲ್ಲಿ ಸ್ಪರ್ಧಿಸಲು ಪ್ರಯತ್ನ ನಡೆದಿದೆಯೇ? ಎಂಬ ಪ್ರಶ್ನೆಗೆ ನಾನು ಬಿಜೆಪಿಗೆ ಬಂದಾಗಲೂ ಆತ ಕಾಂಗ್ರೆಸ್‌ನಲ್ಲೇ ಉಳಿದ. ಇಂದಿಗೂ ನನ್ನ ಪುತ್ರ ಕಾಂಗ್ರೇಸಿಗನೇ. ರಾಜಕೀಯವಾಗಿ ನಾವು ಬೇರೆ ಬೇರೆ. ಆದರೆ ಆತ ನನ್ನ ಮಗ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನಲ್ಲಿ ಮಗನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆದಿದೆಯೇ ? ಎಂದಿದ್ದಕ್ಕೆ ಅದು ಅವನ ವೈಯಕ್ತಿಕ ವಿಚಾರ ಎಂದು ಉತ್ತರಿಸಿದರು. ಜೆಡಿಎಸ್‌ಗೆ ಬಂದ ಮೇಲೂ ನನ್ನ ಮನಸ್ಥಿತಿ ಬದಲಾಗಿಲ್ಲ. ನಾನು ಸ್ವಾಭಿಮಾನಿಯಾಗಿಯೇ ಇರುತ್ತೇನೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ, ಮುಖಂಡ ರಮೇಶ್‌ಗೌಡ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.