ಬೇಲೂರು: ಪರಿಶಿಷ್ಟ ಸಮುದಾಯದ ಮಲ್ಲಿಕಾರ್ಜನ ಖರ್ಗೆರವರು ಸದ್ಯ ಎಐಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರಧಾನಿ ಹುದ್ದೆ ಒಂದೇ ಒಂದು ಮೆಟ್ಟಿಲು, ಈ ಕಾರಣದಿಂದ ಇಡೀ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪೂರ್ಣ ಬೆಂಬಲಿಸುವ ಮೂಲಕ ದೇಶದಲ್ಲಿ ಅಂಬೇಡ್ಕರ್ ಆಶಯವನ್ನು ಪೂರೈಸಬೇಕು ಎಂದು ಹಾಸನ ಜಿಲ್ಲಾ ಎಸ್ಸಿ/ಎಸ್ಟಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಲ್ಲಿಗೆವಾಳು ದ್ಯಾವಪ್ಪ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಸಮುದಾಯಕ್ಕೆ ಸಿಗುವ ಸವಲತ್ತುಗಳನ್ನು ಇಳಿಮುಖ ಮಾಡುತ್ತಿದೆ. ಅಲ್ಲದೆ ಭವ್ಯ ಭಾರತ ಸಂವಿದಾನದ ಬದಲಾವಣೆಗೆ ಮುಂದಾಗುತ್ತಿದೆ. ಇಂತಹ ಭ್ರಷ್ಟ ಸರ್ಕಾರಗಳನ್ನು ಕಿತ್ತು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಕೆಳ ಸಮುದಾಯದ ನಾಯಕನ್ನು ದೇಶದ ಪ್ರಮುಖ ಹುದ್ದೆಗೆ ಕೂರಿಸಲು ತಾವುಗಳು ಕಾಂಗ್ರೆಸ್ ಪಕ್ಷಕ್ಕೆ ಓಟು ನೀಡಬೇಕಿದೆ. ಇಡೀ ಸಮುದಾಯದ ಒಗ್ಗಟ್ಟಿಗೆ ಇದೇ ಮಾರ್ಚ್ ೨೫ರಂದು ಹಾಸನದಲ್ಲಿ ಬೃಹತ್ ಎಸ್ಸಿ/ಎಸ್ಟಿ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆರವರು ಆಗಮಿಸಲಿದ್ದಾರೆ.
ಬೇಲೂರಿನಲ್ಲಿ ಕಾಂಗ್ರೆಸ್ ಪಕ್ಷ ಮೂಂಚೂಣಿಯಲ್ಲಿದೆ. ಆಕಾಂಕ್ಷಿಗಳಾದ ಬಿ.ಶಿವರಾಂ, ಗ್ರಾನೈಟ್ ರಾಜಶೇಖರ, ಇ.ಹೆಚ್.ಲಕ್ಷ್ಮಣ ಮತ್ತು ವೈ.ಎನ್ ಕೃಷ್ಣೇಗೌಡರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಇಡೀ ಸಮುದಾಯ ಒಟ್ಟಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿಕ್ಕಬ್ಯಾಡಿಗೆರೆ ಮಂಜುನಾಥ ಮಾತನಾಡಿ, ಬೇಲೂರು ತಾಲೂಕಿನಲ್ಲಿ ದಲಿತ ಸಮುದಾಯ ಬಹು ದೊಡ್ಡ ಜನಾಂಗ, ಜನ ನಾಯಕರಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಮಾತ್ರ ಕಣ್ಣಿಗೆ ಕಾಣುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಒಟ್ಟಾದರೆ ಶಾಸಕರನ್ನು ಚುನಾಯಿಸಬಹುದು ಆದರೆ ನಮ್ಮಲ್ಲಿ ಒಗ್ಗಟ್ಟು ಕಡಿಮೆಯಾಗಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಸ್ಥಾನವನ್ನು ಈ ಸಮುದಾಯಕ್ಕೆ ನೀಡುತ್ತಿಲ್ಲ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿನ ಬಿಜೆಪಿ ಭ್ರಷ್ಟ ಸರ್ಕಾರ ಸಮುದಾಯವನ್ನು ಒಡೆಯುವ ಹುನ್ನಾರ ಮಾಡುತ್ತಿದೆ. ಅಮಿಷಗಳ ಮೂಲಕ ಮತವನ್ನು ಪಡೆಯಲು ಮುಂದಾದ ಪಕ್ಷಗಳಿಗೆ ತಾವುಗಳು ತಕ್ಕ ಉತ್ತರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಅಕಾಲಿಕ ಮರಣಕ್ಕೆ ತುತ್ತಾದ ಮಾಜಿ ಸಂಸದ ಧ್ರವನಾರಾಯಣರವರಿಗೆ ವೇದಿಕೆಯಲ್ಲಿ ಸಂತಾಪ ಸೂಚಿಸಲಾಯಿತು. ಉಳಿದಂತೆ ಸಭೆಯಲ್ಲಿ ತಾಲೂಕು ಅಧ್ಯಕ್ಷ ಬಾಬು ಶಂಭುನಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ, ರಾಜ್ಯ ಕಾರ್ಯದರ್ಶಿ ಶೇಖರಪ್ಪ, ಜಿಲ್ಲಾ ಪ್ರಚಾರ ಸಮಿತಿ ಸದಸ್ಯ ಆಶೋಕ್, ಮಾಜಿ ಅಧ್ಯಕ್ಷ ದೇವಿಹಳ್ಳಿ ಕುಮಾರ್, ಹಳೇಬಿಡು ಅಧ್ಯಕ್ಷ ರುದ್ರೇಶ್, ಮಾದೀಹಳ್ಳಿ ಅಧ್ಯಕ್ಷ ಪೃಥ್ವಿ, ಬಿಕ್ಕೂಡು ಮಲ್ಲಿಕ್, ರುದ್ರೇಶ್, ಕಾಂಗ್ರೆಸ್ ಮುಖಂಡ ಎಂ.ಜಿ.ವೆಂಕಟೇಶ್ ಮತ್ತು ಹೆಬ್ಬಾಳು ಗಿರೀಶ್ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.