ಅರೇಹಳ್ಳಿ:ಡಾ. ಬಿ.ಆರ್ ರಚಿಸಿರುವ ಸಂವಿಧಾನವನ್ನು ನಾಶ ಮಾಡಿ ಸಂವಿಧಾನವನ್ನು ಪುನಃ ಸೃಷ್ಠಿ ಮಾಡಲು ಬಿಜೆಪಿ ಸರಕಾರ ಹುನ್ನಾರ ನಡೆಸಿದೆ ಎಂದು ಬೇಲೂರು ವಿಧಾನ ಸಭಾ ಜೆಡಿಎಸ್ ಅಭ್ಯರ್ಥಿ ಕೆ.ಎಸ್ ಲಿಂಗೇಶ್ ಆರೋಪಿಸಿದರು.
ಹೋಬಳಿಯ ಮುಖ್ಯ ರಸ್ತೆಯಲ್ಲಿ ನಡೆದ ರೋಡ್ ಶೋ ನ ಮತಯಾಚನೆಯಲ್ಲಿ ಪಾಲ್ಗೊಂಡು ಬಳಿಕ ರಾಮನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ 85 ವರ್ಷಗಳಿಂದ ಮತ ಬ್ಯಾಂಕಿನ ಮೂಲಕ ರಾಷ್ಟ್ರೀಯ ಪಕ್ಷಗಳು ಅಕ್ರಮವಾಗಿ ಮತವನ್ನು ಸಂಗ್ರಹಿಸುತ್ತದೆಯೇ ಹೊರತು ಅದರಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರು ಪಕ್ಷದಲ್ಲಿರುವ ಕಾರ್ಯಕರ್ತರಿಗೆ, ಪಕ್ಷದಿಂದ ಜಯಶಾಲಿಯಾಗುವಂತಹ ಎಲ್ಲರಿಗೂ ಪಕ್ಷಾತೀತವಾಗಿ ಸಮಾನ ಅವಕಾಶ ಕಲ್ಪಿಸಿದ್ದಾರೆ. ಕೋವಿಡ್ ನಡುವೆಯೂ ನಮ್ಮ ತಾಲೂಕಿಗೆ 1800 ಕೋಟಿ ರೂ.ಗಳ ಅನುದಾನ ತಂದಿದ್ದೇನೆ. 880 ಕೋಟಿ ರೂ.ಗಳ ಅನುದಾನದಲ್ಲಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ಮನೆಮನೆಗೆ ಶುದ್ಧ ನೀರನ್ನು ಸರಬರಾಜು ಮಾಡಲಾಗಿದೆ. ಡಾ| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯನ್ನು ಆಂದೂರು ಗ್ರಾಮದಲ್ಲಿ 23 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ. ಬೇಲೂರಿನಲ್ಲಿ ತಲಾ 7.5 ಕೋಟಿ ರೂ.ನಲ್ಲಿ 2 ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದೆ. ಆರೇಹಳ್ಳಿಗೆ ರೇವಣ್ಣನವರ ಅಧಿಕಾರವಧಿಯಲ್ಲಿ ಪದವಿ ಕಾಲೇಜಿಗೆ ಸ್ಥಳ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ಜಾಗವನ್ನು ಗುರುತಿಸಲಾಗಿತ್ತು, ಆದರೆ ಬಿಜೆಪಿ ಸರಕಾರ ಪಟ್ಟಣದಲ್ಲಿ ಪದವಿ ಕಾಲೇಜ್ ಮುಚ್ಚಿಸಿತು ಎಂದರು.
ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಮಾತನಾಡಿ, ಯಗಚಿ ವ್ಯಾಪ್ತಿಯ ಅರೇಹಳ್ಳಿ ಹಾಗೂ ನಾಗೇನಹಳ್ಳಿ ವ್ಯಾಪ್ತಿಗೆ ಯಗಚಿ ಯೋಜನೆಯಡಿ 53 ಕೋಟಿ ರೂ. ಅನುದಾನ ತಂದಿದ್ದೆ. ಇದರಲ್ಲಿ 12 ಕೋಟಿ ದೇವಸ್ಥಾನಕ್ಕೆ, 41 ಕೋಟಿ ರೂ.ಗಳನ್ನು ರಸ್ತೆಗೆ ವಿನಿಯೋಗಿಸಲು ಯೋಜನೆ ರೂಪಿಸಿದ್ದು, ಟೆಂಡರ್ ಸಹ ಕರೆಯಲಾಗಿತ್ತು. ಆದರೆ ಬಿಜೆಪಿ ಸರಕಾರ 53 ಕೋಟಿ ರೂ.ಗಳ ಅನುದಾನವನ್ನು ಹಿಂತೆಗೆದುಕೊಂಡಿತ್ತು. ಬಿಜೆಪಿ ಸರಕಾರದಲ್ಲಿ ಜಿಲ್ಲಾಧ್ಯಕ್ಷ ಒಂದು ಕೋಟಿ ರೂ.ಗಳ ಕೆಲಸ ತಂದಿಲ್ಲ. ಸಮಾಜದಲ್ಲಿ ತೀರಾ ಕೆಳಮಟ್ಟದಲ್ಲಿರುವ ಶೋಷಿತ ವರ್ಗದ ಏಳಿಗೆಗೆ ಬಿಜೆಪಿ ಜಿಲ್ಲಾಧ್ಯಕ್ಷರ ಕೊಡುಗೆ ಶೂನ್ಯ. ಡಬ್ಬಲ್ ಇಂಜಿನ್ ಸರಕಾರದಿಂದ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಮೂರ್ಖತನ ಎಂದರು.
ಈ ವೇಳೆ ಬಿ.ಐ ನಟರಾಜ್, ಅದ್ಧೂರಿ ಚೇತನ್ ಕುಮಾರ್, ಸೋಮಯ್ಯ, ಅಣ್ಣಪ್ಪ, ಪ್ರವೀಣ್ ಸಾಲಾವರ, ದಿನೇಶ್ ಕಡೆಗರ್ಜೆ, ವಕೀಲ ರಾಜು, ಮಲ್ಲಿಕಾರ್ಜುನ್ ನಾರ್ವೆ, ಅಣ್ಣಪ್ಪ, ಕೆ.ಜಿ ಕುಮಾರ್, ಸಂಗಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.