ಅರಸೀಕೆರೆ: ಎನ್. ಆರ್. ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಸುವ ಮೂಲಕ ಗಮನ ಸೆಳೆದರು. ಆಗುಂದ, ದುಮ್ಮೇನಹಳ್ಳಿ ಮತ್ತು ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಾವೇಶ ಹಾಗೂ ಮುತ್ತೈದರಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಯಲ್ಲಿ ಸಾವಿರಾರು ಬೈಕ್ ಸವಾರರು ಪಾಲ್ಗೊಂಡಿದ್ದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸೇರಿದ ಬೈಕ್ ಸವಾರರು ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್ ರಸ್ತೆ ಮಾರ್ಗವಾಗಿ ಲಕ್ಷ್ಮಿ ದೇವರ ಹಳ್ಳಿಯವರೆಗೂ ಬೈಕ್ ಮೂಲಕ ಸಾಗಿದ ಬಿಜೆಪಿ ಕಾರ್ಯಕರ್ತರು ಹಾಗೂ ಎನ್.ಆರ್.ಎಸ್ ಅಭಿಮಾನಿಗಳು ರಸ್ತೆ ಉದ್ದಕ್ಕೂ ತಮ್ಮ ನಾಯಕನ ಪರ ಜಯ ಘೋಷಗಳನ್ನು ಕೂಗುತ್ತಾ ಗಮನ ಸೆಳೆದರು.
ಇನ್ನೂ ಬೈಕ್ ರ್‍ಯಾಲಿಯು ಪಿಪಿ ವೃತ್ತಕ್ಕೆ ಆಗಮಿಸಿದ ವೇಳೆ ಎನ್.ಆರ್.ಎಸ್ ಅಭಿಮಾನಿಗಳು ತಮ್ಮ ನಾಯಕನ ಮೇಲೆ ಪುಷ್ಪಾರ್ಚನೆಗೈದರಲ್ಲದೆ ಬೃಹತ್ ಹಾರವನ್ನು ಹಾಕುವ ಮೂಲಕ ತಮ್ಮ ಅಭಿಮಾನ ಸಮರ್ಪಿಸಿದ್ದಕ್ಕೆ ಪಿಪಿ ವೃತ್ತ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಎನ್.ಆರ್ ಸಂತೋಷ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಅಕ್ಕರೆ ಮತ್ತು ಅಭಿಮಾನ ಕಂಡು ಎದೆ ತುಂಬಿ ಬರುತ್ತಿದೆ, ನಿಮ್ಮೆಲ್ಲರ ಹಾರೈಕೆ ಜತೆಗೆ ಕ್ಷೇತ್ರದ ಮತದಾರರ ಆಶೀರ್ವಾದ ನನ್ನ ರಾಜಕೀಯ ಶಕ್ತಿಯಾಗಿದ್ದು ನಿಮ್ಮೆಲ್ಲರ ಈ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ನಿಮ್ಮ ಕಷ್ಟ ಸುಖದಲ್ಲಿ ನಾನು ನಿಮ್ಮ ಮನೆ ಮಗನಂತೆ ಜೊತೆಯಲ್ಲಿ ಇರುತ್ತೇನೆ ಎಂದು ಭರವಸೆ ನೀಡಿದರು.
ಬೈಕ್ ರ್‍ಯಾಲಿಯಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ಡಿ. ಪ್ರಸಾದ್, ಬಿಜೆಪಿ ಮುಖಂಡರಾದ ವೈ.ಕೆ ದೇವರಾಜ್ ಸಹ್ಯಾದ್ರಿ, ನಗರಸಭೆ ಮಾಜಿ ಅಧ್ಯಕ್ಷ ಬಿ. ಎನ್.ವಿದ್ಯಾಧರ, ನಗರಸಭೆ ಸದಸ್ಯರಾದ ಶ್ವೇತಾ ರಮೇಶ್, ಮೇಲಗಿರಿ ಗೌಡ, ಮುಖಂಡರಾದ ಪುಟ್ಟಪ್ಪ, ಜಯ ದೇವ್, ಡಾಬಾ ರಘು, ಚಿದಾನಂದ, ಪವನ, ಮಂಜುನಾಥ ಮತ್ತಿತರು ಪಾಲ್ಗೊಂಡಿದ್ದರು.