ಹಾಸನ: ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಆಯ್ಕೆ ಜೆಡಿಎಸ್ ಪಕ್ಷದ ವರಿಷ್ಟರಿಗೆ ಕಳೆದ ೬ ತಿಂಗಳಿಂದ ತಲೆನೋವು ಆಗಿ ಮಾರ್ಪಟಿದೆ. ಯಾವಾಗ ಮಾಜಿ ಸಚಿವ ಎ. ಮಂಜು ಜೆಡಿಎಸ್ ಪಕ್ಷಕ್ಕೆ ಎಂಟ್ರಿ ಕೊಟ್ಟರು ಆವಾಗಿನಿಂದ ಹಾಸನ ತಾಲೂಕು ಜೆ.ಡಿ.ಎಸ್ ಪಕ್ಷದಲ್ಲಿ ಹೊಸ ಬೆಳವಣಿಗೆ ಆರಂಭವಾಗಿದೆ ಎಂದು ಜೆಡಿಎಸ್ ಪಕ್ಷದ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ.
ಹಾಸನ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಎಂದು ಕಾಂಗ್ರೆಸ್ ಪಕ್ಷದ ನಾಯಕರ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಇದರಿಂದ ವಿಚಲಿತರಾದ ಹಾಸನ ಕ್ಷೇತ್ರದ ಕೆಲ ಕಾಂಗ್ರೆಸ್ ಪಕ್ಷದ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಷ್ಟಕ್ಕೆ ಸುಮ್ಮನೆ ಕೂರದ ಎ. ಮಂಜು ಕಾಂಗ್ರೆಸ್ ಪಕ್ಷದ ಹಾಸನ ಕ್ಷೇತ್ರದ ಮುಖಂಡ ಬಾಗೂರು ಮಂಜೇಗೌಡರನ್ನು ಸಂಪರ್ಕಿಸಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನಾಗಿಸಲು ಎ. ಮಂಜು ಚರ್ಚೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಬಾಗೂರು ಮಂಜೇಗೌಡ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಲು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಭವಾನಿ ರೇವಣ್ಣ ಮತ್ತು ಸ್ವರೂಪ್ ಪ್ರಕಾಶ್ ಎಂಬ ಬಣಗಳು ಹಾಸನ ಕ್ಷೇತ್ರದಲ್ಲಿ ಅಗಿವೆ. ಇಬ್ಬರಲ್ಲಿ ಒಂದು ಬಣಕ್ಕೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಿದರೆ, ಇನ್ನೊಂದು ಬಣ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಲಿವೆ ಎಂಬ ಮಾಹಿತಿ ಜೆಡಿಎಸ್ ಪಕ್ಷದ ರಾಜ್ಯ ನಾಯಕರಿಗೆ ರವಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆಯಿಂದ ವಿಚಲಿತರಾಗಿರುವ ಹೆಚ್.ಡಿ ರೇವಣ್ಣ ಕುಟುಂಬ ಶತಾಯಗತಾಯ ಶಾಸಕ ಪ್ರೀತಮ್ ಗೌಡರನ್ನು ಸೋಲಿಸಲೇಬೇಕು ಎಂಬ ಹಟಕ್ಕೆ ಬಿದ್ದಿದೆ ಎಂದು ರಾಜಕೀಯ ಪಂಡಿತರ ವಾದವಾಗಿದೆ. ಬಾಗೂರು ಮಂಜೇಗೌಡ ಜೆಡಿಎಸ್ ಪಕ್ಷದ ಹಾಸನ ಕ್ಷೇತ್ರದ ಅಭ್ಯರ್ಥಿಯಾದರೆ, ಭವಾನಿ ರೇವಣ್ಣ ಜೊತೆಯಲ್ಲಿ ಗುರುತಿಸಿಕೊಂಡಿರುವ ನಾಯಕರು, ಸ್ವರೂಪ್‌ಪ್ರಕಾಶ್ ಜೊತೆಯಲ್ಲಿ ಗುರುತಿಸಿಕೊಂಡಿರುವ ನಾಯಕರು ಮತ್ತು ಕಾಂಗ್ರೆಸ್ ಪಕ್ಷದಿಂದ ಬಾಗೂರು ಮಂಜೇಗೌಡ ಜೊತೆಯಲ್ಲಿ ಬರುವ ನಾಯಕರು ಈ ಮೂರು ಬಣಗಳು ಒಗ್ಗಟ್ಟಿನಿಂದ ಹಾಸನ ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡಿದರೆ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಅನುಕೂಲಕರ ವಾತವರಣ ಸೃಷ್ಠಿಯಾಗಲಿದೆ ಎಂಬುದು ಜೆಡಿಎಸ್ ಪಕ್ಷದ ನಾಯಕರ ಲೆಕ್ಕಚಾರವಾಗಿದೆ.
ಬಾಗೂರು ಮಂಜೇಗೌಡ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕೊಟ್ಟರೆ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ೪೦ ಸಾವಿರ ದಾಸ್ ಒಕ್ಕಲಿಗರ ಮತಗಳು ಹೆಚ್.ಡಿ. ರೇವಣ್ಣಗೆ ಲಭಿಸಲಿವೆ ಎಂಬ ರಾಜಕೀಯ ಲೆಕ್ಕಚಾರವು ಇದೆ. ಈ ಬೆಳವಣಿಗೆಗೆ ಗ್ರೀನ್ ಸಿಗ್ನಲ್ ನೀಡಿರುವ ಹೆಚ್.ಡಿ ಕುಮಾರಸ್ವಾಮಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯನ್ನು ರದ್ದುಪಡಿಸಿದ್ದಾರೆ ಎಂಬ ಮಾಹಿತಿ ಜೆಡಿಎಸ್ ಪಕ್ಷದ ಹೆಸರು ಹೇಳಲು ಇಚ್ಚಿಸದ ನಾಯಕ ತಿಳಿಸಿದ್ದಾರೆ. ಮಂಜೇಗೌಡ ಅಭ್ಯರ್ಥಿಯಾದರೆ ದಾಸ ಒಕ್ಕಲಿಗರು, ಮುಳ್ಳು ಒಕ್ಕಲಿಗರು, ಕುರುಬ ಸಮುದಾಯದವರು, ಮುಸ್ಲಿಂ ಮತಗಳು ಮತ್ತು ಕ್ರೈಸ್ತ ಮತಗಳು ನನಗೆ (ಮಂಜೇಗೌಡ) ಲಭಿಸಿದರೆ ಗೆಲುವಿಗೆ ಹತ್ತಿರವಾಗಬಹುದು ಎಂಬುದು ಜೆಡಿಎಸ್ ಪಕ್ಷದ ನಾಯಕರು ಮತ್ತು ಮಂಜೇಗೌಡರ ಲೆಕ್ಕಾಚಾರವಾಗಿದೆ.
ಅಭಿವೃದ್ಧಿಯೇ ಮೂಲ ಮಂತ್ರ. ನನ್ನ ಅಭಿವೃದ್ಧಿ ಕೆಲಸಗಳೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮತಗಳಾಗಿ ಮಾರ್ಪಡುತ್ತವೆ. ಎಂಬ ಲೆಕ್ಕಚಾರದಲ್ಲಿರುವ ಶಾಸಕ ಪ್ರೀತಮ್ ಜೆ. ಗೌಡರನ್ನು ಸೋಲಿಸುವುದು ಸುಲಭದ ಮಾತಲ್ಲ ಎಂದು ಹಾಸನದ ಪುರಪಿತೃಗಳ ವಾದವಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬಿ.ಪಿ ಮಂಜೇಗೌಡರು ಸ್ವರೂಪ್‌ಪ್ರಕಾಶ್‌ರವರನ್ನು ಸಂದಾನ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಅದಕ್ಕಾಗಿ ಕಳೆದ ನಾಲ್ಕು ದಿನಗಳ ಹಿಂದೆ ಸ್ವರೂಪ್ ಪ್ರಕಾಶ್‌ರನ್ನು ಎಂ.ಪಿ. ಕ್ವಾಟ್ರಸ್‌ಗೆ ಹೆಚ್.ಡಿ. ರೇವಣ್ಣ ಕರೆಸಿ ಸಂದಾನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ವೈಯಕ್ತಿಕ ಕಾರಣಗಳಿಂದ ಮಾಜಿ ಶಾಸಕ ದಿ| ಹೆಚ್.ಎಸ್. ಪ್ರಕಾಶ್ ಕುಟುಂಬ ಬಾಗೂರು ಮಂಜೇಗೌಡರ ಮೇಲೆ ಸಾಪ್ಟ್ ಕಾರ್ನರ್ ಹೊಂದಿದ್ದಾರೆ ಎನ್ನಲಾಗಿದೆ.