ಹಾಸನ: ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪು ಮರುಕಳಿಸದೆ ಎಚ್ಚರದಿಂದ ಇದ್ದು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡರು ಎಷ್ಟೇ ಹಣ ಖರ್ಚು ಮಾಡಿದರೂ ಆತನ ಸೋಲನ್ನು ನಾನು ಕಣ್ಣಿನಿಂದ ನೋಡಬೇಕು. ಅಭಿವೃದ್ಧಿಗೆ ಮಾರಕವಾಗಿರುವವರು ಈ ಚುನಾವಣೆಯಲ್ಲಿ ಅಂತ್ಯವಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟೇಬಲ್ ತಟ್ಟಿ ಕರೆ ಕೊಟ್ಟರು.
ನಗರದ 80 ಪೀಟ್ ರಸ್ತೆ ಮಧ್ಯೆ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಭಾರಿ ಇಪ್ಪತ್ತಾರು ಸಾವಿರ ಮತಗಳು ಬಿಜೆಪಿಗೆ ನೀಡಿದ್ದೀರಿ, ನಿಮ್ಮಲ್ಲಿ ವಿನಂತಿ ಮಾಡುತ್ತೇವೆ, ಮತ್ತೇ ಅದೇ ತಪ್ಪು ಮಾಡಬೇಡಿ. ಸ್ವರೂಪ್ ಬಳಿ ದುಡ್ಡಿದಿಯೋ ಇಲ್ಲವೋ ಗೊತ್ತಿಲ್ಲ. ನಮಗೆ ಒಂದು ಜವಾಬ್ದಾರಿ ಇದೆ. ಹಾಸನ ಕ್ಷೇತ್ರಕ್ಕೆ ಒಬ್ಬ ನಾಯಕ ಬೇಕು ಅದು ಸ್ವರೂಪ್ ಆಗಬೇಕು. ನನ್ನ ಜಿಲ್ಲೆಯ ಪ್ರಗತಿಗೆ ಮಾರಕವಾಗುವ ವ್ಯಕ್ತಿ ಬಗ್ಗೆ ನಿಮಗೆ ಎಚ್ಚರವಿರಲಿ ಎಂದರು. ಪ್ರಮುಖವಾಗಿ ಹಾಸನ ಜಿಲ್ಲೆಯವರು ಪ್ರತಿಯೊಬ್ಬರು ಎಚ್ಚರಿಕೆಯಿಂದಿರಿ, ಎಷ್ಟೇ ಹಣ ಖರ್ಚು ಮಾಡಿದರೂ ಅವರ ಅಂತ್ಯವನ್ನು ಈ ಕಣ್ಣಿನಿಂದ ನಾನು ನೋಡಬೇಕು ಕೈಮುಗಿದು ಕೇಳಿಕೊಳ್ಳುತ್ತೇವೆ ಅಂತಹ ವ್ಯಕ್ತಿ ಬೇಡ ಎಂದು ಭಾವುಕರಾಗಿ ಹೇಳಿದರು.
ಹಾಸನ ಜಿಲ್ಲೆ ರಾಜ್ಯಕ್ಕೆ ಮೊದಲು ಇರಬೇಕು ಎನ್ನುವ ಉದ್ದೇಶದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿದ್ದೇವು. ವಿಮಾನ ನಿಲ್ದಾಣಕ್ಕಾಗಿ 1200 ಕೋಟಿ ಮಂಜೂರಾತಿ ನೀಡಿದ್ದೇವು, ಜಾಗವನ್ನು ಮೀಸಲಿಟ್ಟಿದ್ದೇವು, ಈಗ ಅದನ್ನು ಸೈಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿರುವುದು ರೇವಣ್ಣ ಅವರಿಗೋಸ್ಕರ ಅಲ್ಲ, ಜನರಿಗೋಸ್ಕರ. ನಾನು ಜಾತಿವಾದಿಯಲ್ಲ. ನನ್ನ ಜಾತಿಗೆ ಸಿಗಬೇಕಿದ್ದ ಮೀಸಲಾತಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಹಾಸನ ಕ್ಷೇತ್ರದ ಅಭ್ಯರ್ಥಿಗೆ ಮತ ನೀಡಿ, ಸ್ವರೂಪ್ ಎಂತಹ ವ್ಯಕ್ತಿ ಎಂದು ನಿಮಗೆಲ್ಲ ತಿಳಿದಿದೆ. ನಿಮ್ಮೆಲ್ಲರ ಸಹಕಾರ ಅವರ ಮೇಲಿರಲಿ ಎಂದು ಹೇಳಿದರು. ರಾಜ್ಯದಲ್ಲಿ ಎಪ್ಪತ್ತು ವರ್ಷದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಕನ್ನಡಿಗರಿಗೆ ಸ್ವಾಭಿಮಾನ ಬೇಡವೇ? ದೇವೆಗೌಡರಿಗೆ ಕನ್ನಡ ನಾಡಿನ ಚಿಂತೆಯಾಗಿದೆ. ಕಾಂಗ್ರೆಸ್ ನಾಯಕರು ಜೈಲಿಗೆ ಹೋಗಿ ಬಂದವರು. ಡಿಕೆ ಶಿವಕುಮಾರ ಮನೆಯಲ್ಲಿ ಐದು ಕೋಟಿ ಸಿಕ್ಕಿದೆ. ರಾಜ್ಯವನ್ನು ಲೂಟಿ ಮಾಡಿದ್ದಾರೆ, ಪಂಚರತ್ನ ಯಾತ್ರೆ ಐದು ಕಾರ್ಯಕ್ರಮನ ಕೊಟ್ಟಿದೆ, ಮೂರು ಪಕ್ಷದವರು ನೀಡಿರುವ ಭರವಸೆಯನ್ನು ವಿಶ್ಲೇಷಣೆ ಮಾಡುವುದು ಅಗತ್ಯ ಇದೆ. ಜನ ಪರವಾಗಿ, ಬಡವರ ಪರವಾಗಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದನ್ನು ಜನರು ಅರಿತು ಜೆಡಿಎಸ್‌ಗೆ ನಿಮ್ಮೆಲ್ಲರ ಬೆಂಬಲ ಸೂಚಿಸಿ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಾತನಾಡಿ, ಕಾಂಗ್ರೆಸ್ ಅರವತ್ತು ವರ್ಷ ಮೀಸಲಾತಿ ನೀಡಲಿಲ್ಲ. ದೇವೆಗೌಡರು ಮುಸ್ಲಿಂ ಹಾಗೂ ಮಹಿಳೆಯರಿಗೆ 2ಎ ಮೀಸಲಾತಿಯನ್ನು ನೀಡಿದರು. ದೇವೆಗೌಡರು ನೀಡಿದ ಮೀಸಲಾತಿ ಈಗ ರದ್ದಾಗಿದೆ. 13ರಂದು ಬರುವ ಚುನಾವಣೆಯ ನಂತರ ಮತ್ತೇ ತರುತ್ತೇವೆ. ಸೂರ್ಯ ಚಂದ್ರ ಇರುವುದೆಷ್ಟು ಸತ್ಯವೋ ಜೆಡಿಎಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಎರಡು ರಾಷ್ಟ್ರೀಯ ಪಕ್ಷಗಳನ್ನು ಮೈಸೂರ್ ಸ್ಯಾಂಡಲ್ ಸೋಪ್ ನಲ್ಲಿ ಮೇ 13ರಂದು ವಾಶ್ ಮಾಡುತ್ತೇವೆ. ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ನಮ್ಮ ಹೆಚ್.ಎಸ್ ಸ್ವರೂಪ್ ಅವರಿಗೆ ನಿಮ್ಮ ಬೆಂಬಲ ಇರಲಿ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ್ಯೆ ಭವಾನಿ ರೇವಣ್ಣ ಮಾತನಾಡಿ, ದೇವೇಗೌಡರು ಆರೋಗ್ಯ ಸರಿಯಿಲ್ಲದಿದ್ದರೂ ಪಕ್ಷ ಸಂಘಟನೆ ಮಾಡಲು ಹೋರಾಟ ಮಾಡುತ್ತಿದ್ದಾರೆ, ಕಾರಣ ಕುಮಾರಣ್ಣನವರನ್ನು ಮುಖ್ಯಮಂತ್ರಿ ಮಾಡಲು. ಜನರ ಪರ ಕೆಲಸ ಮಾಡುವ ಏಕೈಕ ಪಕ್ಷ ಎಂದರೆ ಅದು ಜೆಡಿಎಸ್ ಪಕ್ಷ. ಜೆಡಿಎಸ್ ಪಕ್ಷ ತಂದಿರುವ ಕಟ್ಟಡಗಳಿಗೆ ಬಣ್ಣ ಬಳಿಯಲು ಇವರಿಗೆ ಸಾಧ್ಯವಿಲ್ಲ. ಜೆಡಿಎಸ್ ಪಕ್ಷದಿಂದ ಗೆದ್ದವರಿಗೆ ದೇವರ, ದೇವೆಗೌಡರ, ಕಾರ್ಯಕರ್ತರ ಆಶೀರ್ವಾದ ಇದೆ. ಸ್ವರೂಪ್ ಅವರನ್ನು ಕುಮಾರಸ್ವಾಮಿ ಅವರು, ರೇವಣ್ಣ, ಹಾಗೂ ಸಿ.ಎಂ ಇಬ್ರಾಹಿಂ ಅವರು ಸೇರಿ ಸೂಕ್ತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಸ್ವರೂಪ್ ಅವರನ್ನು ಗೆಲ್ಲಿಸುವ ಮೂಲಕ, ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ದೇವೆಗೌಡರಿಗೆ ಉಡುಗೊರೆಯಾಗಿ ನೀಡೋಣ ಎಂದು ಕರೆ ಕೊಟ್ಟರು. ಕುಮಾರಣ್ಣ ಹೇಳಿದಂತೆ ನಡೆಯುವ ರಾಜಕಾರಣಿ, ಜನರು ನೆಮ್ಮದಿಯಿಂದ ಬದುಕಲು ಜೆಡಿಎಸ್ ಗೆಲ್ಲಿಸುವುದು ಅನಿವಾರ್ಯ ಎಂದು ಹೇಳಿದರು.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ ಸ್ವರೂಪ್, ಅವರ ತಾಯಿ ಲಲಿತಮ್ಮ, ಸ್ವಾಮಿಗೌಡ, ನಗರಸಭೆ ಸದಸ್ಯರು, ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.