ಬೇಲೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್. ಧೃವ ನಾರಾಯಣ ಅವರಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆಯಲ್ಲಿ ಧೃವ ನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಕೆಪಿಸಿಸಿ ಸದಸ್ಯ ಬಿ. ಶಿವರಾಂ ಅವರು ಸರಳ ಸಜ್ಜನಿಕೆಗೆ ಹೆಸರಾಗಿದ್ದ ಆತ್ಮೀಯ ಸ್ನೇಹಿತರಾದ ಧೃವ ನಾರಾಯಣ ಅವರ ಅಗಲಿಕೆ ನಿಜಕ್ಕೂ ದುಃಖದ ಸಂಗತಿ. ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಅವರು ಜಿಲ್ಲೆಗೆ ಉತ್ತಮ ಸಂಘಟನೆ ಮಾಡುವ ಜೊತೆಗೆ ಇಡೀ ರಾಜ್ಯದಲ್ಲೇ ಪಕ್ಷವನ್ನು ಸಂಘಟನೆ ಮಾಡುವಲ್ಲಿ ನಿಸ್ಸೀಮರಾಗಿದ್ದ ವ್ಯಕ್ತಿ. ಎಂತಹ ಸಂದರ್ಭದಲ್ಲಿ ಸಹ ಕಾರ್ಯಕರ್ತರಿಗೆ ದೈರ್ಯ ತುಂಬುವ ಮೂಲಕ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಲು ಎಲ್ಲಾ ರೀತಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಂತ ವ್ಯಕ್ತಿ ಇಂದು ನಮ್ಮನ್ನು ಅಗಲಿರುವುದು ನಿಜಕ್ಕೂ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಮಾಜಿ ಸಫಾಯಿ ಕರ್ಮಚಾರಿ ಅಧ್ಯಕ್ಷ ಎಮ್. ಆರ್. ವೆಂಕಟೇಶ ಮಾತನಾಡಿ, ಒಂದು ವಾರದ ಹಿಂದಷ್ಟೇ ಬೇಲೂರಿನಲ್ಲಿ ನಡೆದ ಬೃಹತ್ ಕಾರ್ಯಕ್ರಮವಾದ ಪ್ರಜಾ ಧ್ವನಿಯಲ್ಲಿ ಸಂಘಟನೆ ಹೇಗೆ ಮಾಡಬೇಕು, ಈ ಬಾರಿ ಹಾಸನ ಜಿಲ್ಲೆಯಲ್ಲಿ ೭ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಈ ಬಾರಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಒಂದು ಸುಂದರ ಕನಸನ್ನು ಕಂಡಿದ್ದರು. ಆದರೆ ಅವರ ಶ್ರಮಕ್ಕೆ ಪ್ರತಿಫಲ ಸಿಗುವ ಮುನ್ನವೇ ನಮ್ಮನ್ನು ಅಗಲಿರುವುದು ನಮಗೆ ದೊಡ್ಡ ನೋವುಂಟು ಮಾಡಿದೆ. ಇದು ನನ್ನ ಸಹೋದರನನ್ನು ಕಳೆದುಕೊಂಡಂತಾಗಿದೆ ಎಂದು ಕಣ್ಣೀರು ಹಾಕಿದರು.
ಇದೇ ವೇಳೆ ಅವರ ಅಭಿಮಾನಿಗಳು ನೂರಕ್ಕೂ ಹೆಚ್ಚು ಕಾರ್ಯಕರ್ತರು ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ, ಸದಸ್ಯರಾದ ಜಮಾಲ್, ರತ್ನ ಸತ್ಯನಾರಾಯಣ, ಜಿಪಂ ಮಾಜಿ ಸದಸ್ಯ ಸೈಯದ್ ತೌಫೀಕ್, ಮುಖಂಡರಾದ ಅಶೋಕ, ಸುಬ್ರಹ್ಮಣ್ಯ, ದಾಸಪ್ಪ, ಮಲ್ಲಿಕ್, ಇತರರು ಹಾಜರಿದ್ದರು.