ಅರಸೀಕೆರೆ: ಮನುಷ್ಯ ಬದುಕಿದ್ದಾಗ ಅವನ ಕುರಿತು ಆಡುವ ಮಾತಿಗಿಂತ ಅವನು ದೇಹತ್ಯಾಗ ಮಾಡಿದ ನಂತರ ಸಮಾಜ ಆಡುವ ಮಾತುಗಳೇ ಮೃತ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ ಎಂದು ತಾಲೂಕು ದೇವರ ದಾಸಿಮಯ್ಯ ಸಂಘದ ಸಂಸ್ಥಾಪಕ ಅಧ್ಯಕ್ಷ ವೈ.ಕೆ. ದೇವರಾಜ ಹೇಳಿದರು.
ಇತ್ತೀಚೆಗೆ ಹೃದಯಾಘಾತದಿಂದ ವಿಧಿವಶರಾದ ಸಂಘದ ಕಾರ್ಯದರ್ಶಿ ಯಾಳವಾರೆ ರಮೇಶ ಅವರಿಗೆ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮೃತ ರಮೇಶ ಅವರು ಸಂಘದ ಕಾರ್ಯದರ್ಶಿಯಾಗಿ ಅಷ್ಟೇ ಅಲ್ಲದೆ ಗಿಜಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಹಾರನಹಳ್ಳಿ ಬನಶಂಕರಿ ದೇವಾಲಯದ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿಯಾಗಿ ಹೀಗೆ ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದ ರಮೇಶ ಅವರ ಅಕಾಲಿಕ ನಿಧನ ಮೃತರ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೆ ಅಪಾರ ನೋವು ತಂದಿದೆ ಎಂದು ಕಂಬನಿ ಮಿಡಿದರು.
ದೇವರ ದಾಸಿಮಯ್ಯ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸ್ವಭಾವ ಕೋಳಗುಂದ ಮಾತನಾಡಿ, ಕಳೆದ ವಾರ ವಷ್ಟೆ ನಡೆದ ಸಂಘದ ಸಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಲವಲವಿಕೆಯಿಂದ ಇದ್ದ ರಮೇಶ ಅವರ ಸಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನ ನೀಡುವಂತೆ ಕರೆ ನೀಡಿದರು. ಅಲ್ಲದೆ ತಮ್ಮ ಕುಟುಂಬಗಳಿಗೆ ತಾವೇ ಆಧಾರ ಸ್ಥಂಭ ಎಂಬುದನ್ನ ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಶ್ರದ್ಧಾಂಜಲಿ ಸಭೆಯಲ್ಲಿ ದೇವರ ದಾಸಿಮಯ್ಯ ಸಂಘದ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳಾದ ಸಂತೋಷ, ಪರಮೇಶ, ಮಂಜುನಾಥ, ರಂಗನಾಥ, ಪ್ರಸನ್ನ, ಶ್ವೇತಾ ನಟರಾಜ, ಮತ್ತಿತರು ಪಾಲ್ಗೊಂಡಿದ್ದರು.