ಹಾಸನ: ಶ್ರವಣಬೆಳಗೊಳ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ವಿಧಿವಶರಾಗಿರುವುದಕ್ಕೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂಲತಃ ಕಾರ್ಕಳದ ವರಂಗ ಗ್ರಾಮದದಲ್ಲಿ ರತ್ನವರ್ಮ ಹೆಸರಿನಲ್ಲಿ 1949 ಮೇ 3ರಂದು ಜನಿಸಿದ ಪರಮಪೂಜ್ಯರು 1970ರಲ್ಲಿ ಶ್ರವಣಬೆಳಗೊಳ ಜೈನ ಮಠದ ಪೀಠವೇರಿದ್ದರು. ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠದ ಏಳಿಗೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಇತಿಹಾಸ ತಜ್ಞ, ತತ್ವಜ್ಞಾನಿ, ಇತಿಹಾಸ, ಕನ್ನಡ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಶ್ರೀಗಳು, ಪ್ರಾಕೃತ ಭಾಷೆಯಲ್ಲೂ ಸ್ನಾತಕೋತ್ತರ ಪದವಿ ಪಡೆದು, ಈ ಭಾಷೆಯ ಅಭಿವೃದ್ಧಿಗೆ ಅಹರ್ನಿಶಿ ದುಡಿದಿದ್ದರು.
ನೂರಾರು ಜೈನ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿದ ಕಾಯಕ ಯೋಗಿ. ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಗಳು ಪಾಲಿಟೆಕ್ನಿಕ್, ಇಂಜಿನಿಯರಿಂಗ್, ನರ್ಸಿಂಗ್, ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದರು. ಇವರ ನಿಧನದಿಂದ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದಿದ್ದಾರೆ.
ಜೈನ ಧರ್ಮದ ಪ್ರತಿಪಾದಕರಲ್ಲಿ ಪ್ರಮುಖರಾಗಿದ್ದ ಶ್ರೀಗಳು, 24 ತೀರ್ಥಂಕರರ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಶ್ರಮಿಸಿದ್ದರು. 12 ವರ್ಷ ವಾಹನ ಸಂಚಾರವನ್ನೇ ಮಾಡದೆ ದವಳ ಮತ್ತು ಜಯದವಳ ಆಗಮ ಗ್ರಂಥ ರಚನೆ ಮಾಡಿದ್ದು, ಇವರ ಕಾಯಕನಿಷ್ಠೆ, ಧರ್ಮಶ್ರದ್ಧೆಗೆ ಹಿಡಿದ ಕನ್ನಡಿ. 1981, 1993, 2006 ಹಾಗೂ 2018ರ ಮಹಾ ಮಸ್ತಾಭಿಷೇಕವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ಜಿಲ್ಲೆ, ರಾಜ್ಯ, ದೇಶ ಮಾತ್ರವಲ್ಲ ವಿಶ್ವದಲ್ಲೇ ಮೆಚ್ಚುಗೆ ಪಡೆದಿದ್ದರು.
ಶ್ರವಣಬೆಳಗೊಳ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದ ಶ್ರೀಗಳ ಆತ್ಮಕ್ಕೆ ಅವರು ಅತಿಯಾಗಿ ನಂಬಿದ್ದ, ಆರಾಧಿಸುತ್ತಿದ್ದ ಭಗವಾನ್ ಬಾಹುಬಲಿ ಸ್ವಾಮಿ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.