ಹಾಸನ: ಅನಾರೋಗ್ಯಕ್ಕಿಡಾಗಿದ್ದ ನಗರಸಭೆ ಕಿರಿಯ ಎಂಜಿನಿಯರ್ ಪ್ರವೀಣ್ ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಎರಡೂ ದಿನದಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಪ್ರವೀಣ್ ಅವರಿಗೆ ಕಡಿಮೆ ರಕ್ತದ ಒತ್ತಡದ ಸಮಸ್ಯೆ ಕೂಡ ಇತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಪ್ರವೀಣ್ ನಿಧನರಾಗಿದ್ದಾರೆ.
ಪ್ರವೀಣ್ ಅವರ ತಂದೆಯೂ ಸಹ ನಗರಸಭೆ ನೌಕರರಾಗಿದ್ದರು, ಅವರ ನಿಧನ ನಂತರ ಪ್ರವೀಣ್ ಕಿರಿಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಪ್ರವೀಣ್, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪ್ರವೀಣ್ ನಿಧನಕ್ಕೆ ನಗರಸಭೆ ಅಧ್ಯಕ್ಷ ಮೋಹನ್ ಕುಮಾರ್, ಆಯುಕ್ತ ಪರಮೇಶ್ವರಪ್ಪ, ಸಿಬ್ಬಂದಿ ವರ್ಗ ಮತ್ತು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.