ಬೇಲೂರು: ೧೨ನೇ ಶತಮಾನದಲ್ಲಿ ಮೂಡಿಬಂದ ಅಗಮ್ಯ ವಚನ ಸಾಹಿತ್ಯದ ಅನುಭವ ವಿಚಾರಗಳನ್ನು ಮೊದಲು ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ನಡೆಸುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ ಎನ್.ಮಮತ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ದೇವರ ದಾಸಿಮಯ್ಯನವರ ಜಯಂತಿ ಸಮಾರಂಭ ಉದ್ಘಾಟನೆ ನಡೆಸಿ ಮಾತನಾಡಿದ ಅವರು ೧೨ನೇ ಶತಮಾನ ಎಂದಾಗ ನಮಗೆ ನೆನಪಾಗುವುದು ಅಂದಿನ ವಚನ ಸಾಹಿತ್ಯ ಚಳವಳಿ ೧೧ನೇ ಶತಮಾನದ ಕೊನೆಯ ಭಾಗ, ೧೨ನೇ ಶತಮಾನದ ಪ್ರಾರಂಭದಲ್ಲಿ ಬಂದ ದೇವರ ದಾಸಿಮಯ್ಯ ವೃತ್ತಿಯಲ್ಲಿ ನೇಕಾರರಾಗಿ ಬಟ್ಟೆ ನೇಯ್ಗೆ ಕಾಯಕ ಮಾಡುತ್ತಿದ್ದರು. ಜಾಗತಿಕ ಮಟ್ಟದ ಇಂದಿನ ದಿನಗಳಲ್ಲಿ ಮನುಷ್ಯ ಎಷ್ಟೇ ಸಂಪಾದನೆ ಮಾಡಿದರೂ ಇನ್ನಷ್ಟು ಮಾಡಬೇಕು ಎಂಬ ಸಂಗ್ರಹ ಪ್ರವೃತ್ತಿಗೆ ಮುಂದಾಗುತ್ತಾನೆ. ಆದರೆ ದೇವರ ದಾಸಿಮಯ್ಯ ಹೆಚ್ಚು ಸಂಗ್ರಹಣೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಯಕ ಮತ್ತು ದಾಸೋಹದ ಶ್ರೇಷ್ಠತೆ ಎತ್ತಿಹಿಡಿದ್ದಾರೆ ಎಂದ ಅವರು ದೇವರ ದಾಸಿಮಯ್ಯ ಕನ್ನಡದ ಆದ್ಯ ವಚನಕಾರ, ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ನಾಡನ್ನು ಬೆಳಗಿದ ಮಹಾಕಾಯಕ ಯೋಗಿ, ಬಸವಣ್ಣನವರೂ ತಮ್ಮ ವಚನದಲ್ಲಿ ದಾಸಿಮಯ್ಯನನ್ನು ಸ್ಮರಿಸಿದ್ದಾರೆ. ವಚನಗಳು ಕೇವಲ ಬರವಣಿಗೆಗೆ ಸೀಮಿತವಲ್ಲ. ಅವು ಬದುಕಿನ ಅನುಭಾವದ ಮಹತ್ವದ ಸಾಧನಗಳು ಎಂದು ತೋರಿಸಿಕೊಟ್ಟವರು ಆದ್ಯ ವಚನಕಾರ ದೇವರದಾಸಿಮಯ್ಯ ಎಂದರು.
ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ೧೧ನೇ ಶತಮಾನದ ಅಂತ್ಯಭಾಗದಲ್ಲಿ ಜನ್ಮ ನೀಡಿದ್ದ ದಾಸಿಮಯ್ಯನವರು ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ವಚನ ಚಳವಳಿ ನಡೆದು ೯೦೦ ವರ್ಷಗಳೇ ಉರುಳಿದರೂ ಇಂದಿಗೂ ಪುರುಷ ಮತ್ತು ಸ್ತ್ರೀಯರ ನಡುವೆ ಲಿಂಗ ಅಸಮಾನತೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಅಂದು ನಮ್ಮ ಶಿವಶರಣರು ಶರಣಸತಿ ಲಿಂಗಪತಿ ಎನ್ನುವ ಮೂಲಕ ಪುರುಷ ಮತ್ತು ಸ್ತ್ರೀಯರ ನಡುವೆ ಜೈವಿಕವಾಗಿ ಭಿನ್ನತೆಯಿದೆ, ಇದನ್ನು ಹೊರತುಪಡಿಸಿದರೆ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲಿ ಸಮಾನರೇ ಎಂಬುದನ್ನು ಸಾರಿಹೇಳಿದರು ಎಂದರು.
ಬಡವರು ಹಸಿವಿನಿಂದ ಪಾರಾಗಲು ಶ್ರೀಮಂತರನ್ನು ಆಶ್ರಯಿಸುತ್ತಾರೆ. ಆ ಮೂಲಕ ಅವರು ಬಡವರನ್ನು ತಮ್ಮ ದಾಳಗಳನ್ನಾಗಿ ಬಳಸಿಕೊಳ್ಳುತ್ತಾರೆ ಎಂಬುದನ್ನು ೧೨ನೇ ಶತಮಾನದಲ್ಲೇ ದೇವರದಾಸಿಮಯ್ಯ ಪ್ರತಿಪಾದಿಸುವ ಮೂಲಕ ಕಾಯಕ ಸಮಾಜಕ್ಕೆ ಆಧ್ಯತೆ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿರಸ್ತೆದಾರ ಅಶೋಕ, ತಾಲೂಕು ದೇವಾಂಗ ಸಮಾಜದ ಅಧ್ಯಕ್ಷ ವಸಂತ ಶೇಖರ, ಗೌರವಾಧ್ಯಕ್ಷ ಮತ್ತು ತಾಲೂಕು ವರ್ತಕರ ಸಂಘದ ಅಧ್ಯಕ್ಷ ಗಿರಿಯಪ್ಪಗೌಡ, ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ತೀರ್ಥಂಕರ, ಮೋಹನ್ ಕುಮಾರ, ದಾಸಪ್ಪ, ಕುಮಾರಣ್ಣ, ರಂಗನಾಥ, ಶಿವಪ್ಪ, ಶಿವಮರಿಯಪ್ಪ, ರವಿ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.