ಆಲೂರು: ಆದ್ಯ ವಚನಕಾರ, ದಾರ್ಶನಿಕ, ಸತ್ಯ ಧರ್ಮದ ಮೂಲ ಚೈತನ್ಯ, ಸಮ ಸಮಾಜದ ಕನಸುಗಾರ, ಶ್ರೇಷ್ಠ ಸಾಹಿತಿ, ಕಾಯಕ ಸಂತದೇವರ ದಾಸಿಮಯ್ಯನವರ ವಚನಗಳು, ಜೀವನ ಮೌಲ್ಯಗಳು, ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ ಅಭಿಪ್ರಾಯಪಟ್ಟರು.
ಅವರು ಆಲೂರು ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಸಂತ ಬಿಲಿವಿಯರ್ಸ್ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ಜೇಡರ ದಾಸಿಮಯ್ಯ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವರ್ಗರಹಿತ, ವರ್ಣರಹಿತ, ಲಿಂಗರಹಿತ ಸಮಾಜವನ್ನು ಕಟ್ಟುವ ಹಿನ್ನೆಲೆಯಲ್ಲಿ, ಸೌಶೀಲ್ಯವಾದ ಬಾಳು ಮನುಕುಲಕ್ಕೆ ಸದಾ ಪ್ರಾಪ್ತವಾಗಬೇಕೆಂಬ ಸದಾಶಯದೊಂದಿಗೆ ಉನ್ನತ ವಿಚಾರಧಾರೆಗಳನ್ನು ತಮ್ಮ ವಚನಗಳ ಮುಖೇನ ಜನಸಾಮಾನ್ಯರಿಗೆ ಅರ್ಥವಾಗುವ ಆಡು ಭಾಷೆಯಲ್ಲಿ ಸರಳವಾಗಿ ಬರೆದು ಸಮಾಜ ಪರಿವರ್ತನೆಗೆ ನಾಂದಿ ಹಾಡಿದ ಕೀರ್ತಿ ಆದ್ಯ ವಚನಕಾರ ದಾಸಿಮಯ್ಯನವರಿಗೆ ಸಲ್ಲುತ್ತದೆ ಎಂದರು.
ಸಂತ ಬಿಲಿವಿಯರ್ಸ್ ಚರ್ಚ್ ಫಾದರ್ ಡಿ.ಸಿ.ಬಸವರಾಜ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಇಂದು ಹಮ್ಮಿಕೊಂಡಿರುವ ದಾಸಿಮಯ್ಯ ಜಯಂತಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿದೆ. ಭಾರತ ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮ ಕ್ಷೇತ್ರ ಬಹಳ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ ನಾಕಲಗೂಡು ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಮ್ಮ ತಾಲ್ಲೂಕಿನಿಂದ ಪ್ರಾರಂಭಗೊಂಡು ಇಂದು ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಹರಡಿ ವಿಶ್ವಮುಖ ಬೆಳವಣಿಗೆಯತ್ತ ಸಾಗುತ್ತಿರುವುದು ಶ್ಲಾಘನೀಯ ಕಾರ್ಯ. ಯಾವುದೇ ಸಂಘ ಸಂಸ್ಥೆಗಳಿಗೂ ಪರ್ಯಾಯವಾಗದೇ ತನ್ನದೇ ಗುರಿ ಉದ್ದೇಶಗಳೊಂದಿಗೆ ನೂರಾರು ಎಲೆಮರೆ ಕಾಯಿಯಂತಹ ಸಾಧಕರನ್ನು, ಕವಿ ಸಾಹಿತಿಗಳನ್ನು ಗುರುತಿಸಿ ಮುನ್ನೆಲೆಗೆ ತರುವ ಕೆಲಸವನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ನಟರಾಜ್ ನಾಕಲಗೂಡು, ಉದಯವಾಣಿ ವರದಿಗಾರ ಟಿ.ಕೆ.ಕುಮಾರ ಸ್ವಾಮಿ ಹಾಗೂ ಜನಮಿತ್ರ ಪತ್ರಿಕೆಯ ವರದಿಗಾರ ಟಿ.ಎಂ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾ. ಗೌರವಾಧ್ಯಕ್ಷ ಫಾ.ಹೈ. ಗುಲಾಂ ಸತ್ತಾರ, ತಾ. ಉಪಾಧ್ಯಕ್ಷ ಟಿ.ಕೆ.ನಾಗರಾಜ, ತಾ. ಕಾರ್ಯದರ್ಶಿ ಧರ್ಮ ಕೆರಲೂರು, ಹಿರಿಯ ಪತ್ರ ಕರ್ತ ಎಚ್.ಡಿ.ಪ್ರದೀಪಕುಮಾರ ಮುಂತಾದವರು ಮಾತನಾಡಿದರು.