ಬೇಲೂರು: ಪಟ್ಟಣದ ಶ್ರೀ ಚನ್ನಕೇಶವ ದೇವಾಲಯದ ಮುಂಭಾಗ ಹೊಯ್ಸಳ ಸಾಹಿತ್ಯ ಮಂಟಪದಲ್ಲಿ ನಡೆಯುತ್ತಿರುವ ಬೇಲೂರು ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಪುರಸಭೆ ಮುಂಭಾಗ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಪಟ್ಟಣದಲ್ಲಿ ನಡೆಯುತ್ತಿರುವ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ದೇಗುಲ ಬಳಿ ಕನ್ನಡ ಬಾವುಟಗಳಿಂದ ಸಿಂಗರಿಸಲಾಗಿತ್ತು. ವಿಶ್ವ ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲ ಮುಂಭಾಗ ಹೊಯ್ಸಳ ಸಾಹಿತ್ಯ ಮಂಟಪದ ಬೃಹತ್ ಪೆಂಡಾಲ್ ನಿರ್ಮಾಣ ಮಾಡಲಾಗಿತ್ತು. ಸಾಹಿತಿ ಡಾ. ವಿಜಯದಬ್ಬೆ ಮಹಾದ್ವಾರ ಹಾಗೂ ಖ್ಯಾತ ನಾಟಕಕಾರ ಬೇಲೂರು ಕೃಷ್ಣ ಮೂರ್ತಿ ವೇದಿಕೆ ಕಾರ್ಯಕ್ರಮಕ್ಕೆ ಮೆರಗನ್ನು ತಂದರು.
ಇಂದಿರಮ್ಮ ಅವರನ್ನು ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಪಟ್ಟಣದ ಪುರಸಭೆ ಮುಂಭಾಗದಿಂದ ಆರಂಭಗೊಂಡಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಸುನೀತಾ, ಆರಕ್ಷಕ ವೃತ್ತ ನಿರೀಕ್ಷಕ ಎಸ್. ರವಿಕಿರಣ, ಇತರರಿಂದ ಚಾಲನೆ ದೊರಕಿತು.
ಕಸಾಪ ನಿರ್ದೇಶಕ ಎಮ್. ಸಿ. ದಿನೇಶ, ಬಿ. ಆರ್. ಲೋಹಿತ್, ಕೇಶವ ಹತ್ವಾರ್, ಹಾಗೂ ಸುಲೈಮಾನ್ ಕಾರ್ಯಕ್ರಮ ನಡೆಸಿ ಕೊಟ್ಟರು. ಮೆರವಣಿಗೆ ಮುಗಿದ ನಂತರ ವೇದಿಕೆ ಬಳಿ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಗೂ ರೈತ ಗೀತೆ ನಂತರ ವೇದಿಕೆ ಕಾರ್ಯಕ್ರಮ ನಡೆಯಿತು. ಕಸಾಪ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಕನ್ನಡ ಅಭಿಮಾನಿಗಳು ಇದ್ದರು.