ಬೇಲೂರು: ಕೃಷಿಯಿಂದ ರೈತರೇ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಇಲ್ಲಿನ ಸ್ವಾಮೀಜಿಗಳ ಕೃಷಿ ಪ್ರೀತಿ ಕಂಡರೆ ನಿಜಕ್ಕೂ ಅಚ್ಚರಿಯೊಂದಿಗೆ ಸಂತಸವೂ ಆಗುತ್ತದೆ. ಮಠದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕೆಲಸದ ನಡುವೆ ತಾವೇ ಜಮೀನಿಗೆ ಇಳಿದು ಕೃಷಿ ಕಾಯಕದಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತಿರುವ ಶ್ರೀಗಳ ಸಾಹಸಗಾಥೆ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದೆ.
ಹೌದು! ಕಾಯಕದಿಂದ ಬಂದಿದ್ದು ಕಾರೇ ಸೊಪ್ಪಾದರೂ ಲಿಂಗಕ್ಕೆ ಅರ್ಪಿತ ಎಂಬ ವಚನದಂತೆ ಕಾಯಕ-ದಾಸೋಹದ ಬಗ್ಗೆ ಅಗಮ್ಯ ನಂಬಿಕೆ ಹೊಂದಿದ ಪುಷ್ಪಗಿರಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಠಕ್ಕೆ ಸಂಬಂಧ ಪಟ್ಟ ೫೦ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಕೃಷಿ ಕಾಯಕದ ಜೊತೆ ಸಾವಯವ ಕೃಷಿ, ಎರೆಹುಳು ಕೃಷಿ ಸೇರಿದಂತೆ ನಾನಾ ಬಗೆಯಲ್ಲಿ ಅವಿರತ ಕೆಲಸಗಳಿಗೆ ಆದ್ಯತೆ ನೀಡುತ್ತಾ ತಮ್ಮ ಉಳಿದ ವೇಳೆಯನ್ನು ಸಂಪೂರ್ಣವಾಗಿ ಜಮೀನಿನಲ್ಲಿ ಕಳೆದ ಕಾರಣದಿಂದ ೧೦ ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳು ಸಾವಯವ ಕೃಷಿಯಿಂದ ಸಮೃದ್ಧಿಯಾಗಿ ಬೆಳೆದ ಫಸಲಿನ ಹಂತಕ್ಕೆ ಬಂದಿದೆ. ಇನ್ನು ಉಳಿದ ಭೂಮಿಯಲ್ಲಿ ತೆಂಗು ಸೇರಿದಂತೆ ವಿವಿಧ ಹಣ್ಣಿನ ಜಾತಿಯ ಗಿಡಗಳು, ಪಕ್ಷಿಗಳಿಗೆ ಅನುಕೂಲವಾದ ಹಣ್ಣಿನ ಗಿಡಗಳನ್ನು ಹಾಕಿದ್ದಾರೆ. ಇದರ ಜೋತೆಗೆ ರೈತರ ಪರವಾಗಿ ನೀರಾವರಿ ಹೋರಾಟ, ಪರಿಸರ ಕಾಳಜಿ, ವಿಶೇಷವಾಗಿ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿ ರಾಷ್ಟ್ರ ಮಟ್ಟದಲ್ಲಿ ತಮ್ಮದೆಯಾದ ಖ್ಯಾತಿಯನ್ನು ಪಡೆದಿದ್ದಾರೆ.
ರಾಸಾಯನಿಕ ಗೊಬ್ಬರಗಳ ಹೆಚ್ಚುತ್ತಿರುವ ಬೆಲೆ, ಪರಿಸರ ಕಾಳಜಿ ಮತ್ತು ಇಂಧನದ ಬಿಕ್ಕಟ್ಟು ಹೆಚ್ಚುತ್ತಿರುವುದರಿಂದ ಸಸ್ಯಗಳಿಗೆ ಅಗ್ಗದ ಮೂಲದಲ್ಲಿ ಪೋಷಕಾಂಶಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಪುಷ್ಪಗಿರಿ ಶ್ರೀಗಳು ಎರೆಹುಳು ಗೊಬ್ಬರದ ತಯಾರಿಕೆಗೆ ಮುಂದಾಗಿದ್ದಾರೆ. ದೇಶಿಯ ಎರೆಹುಳು ಸಾಕಾಣಿಕೆಯಲ್ಲಿ ಅಂತಹ ಪರಿಣಾಮ ಕಾಣದ ಶ್ರೀಗಳು ಗುಜರಾತ್ ಮಾದರಿಯ ಎರೆಹುಳುಗಳ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಪ್ರಸ್ತುತ ಗುಜರಾತ್ ಮಾದರಿ ಎರೆಹುಳು ಗೊಬ್ಬರ ನಮ್ಮ ಜಮೀನಿಗೆ ಬಳೆಸಿ ಮಾರಾಟ ಮಾಡಬಹುದು ಈ ಬಗ್ಗೆ ಕೃಷಿಕರು ಅಲೋಚನೆ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಒಟ್ಟಾರೆ ತಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಭಕ್ತರಿಗೆ ಕಾಯಕ ಪ್ರಜ್ಞೆಯನ್ನು ಮೂಡಿಸುತ್ತಿರುವ ಪುಷ್ಪಗಿರಿ ಜಗದ್ಗುರುಗಳ ಸಾಹಸಗಾಥೆಯನ್ನು ಆಸಕ್ತ ರೈತರು ಕಣ್ಣಾರೆ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.