ಬೇಲೂರು: ತಾಲ್ಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ. ಹುಣಸೆಕೆರೆ ಗ್ರಾಮದಲ್ಲಿ ನಿರ್ಮಾಣ ಆಗುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಗುಣಮಟ್ಟ ಕಾಪಾಡುವಂತೆ ಹೇಳಿದ ಗ್ರಾಮ ಪಂಚಾಯಿತಿ ಸದಸ್ಯೆ ಸೇರಿದಂತೆ ಅವರ ಪತಿ ಹಾಗೂ ಆತನ ಸಹೋದರನ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಎಂ. ಹುಣಸೆಕೆರೆ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಹೆಬ್ಬಾಳು ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಅವರ ಪತಿ ಚಂದ್ರೇಶ ಹಾಗೂ ರಂಗಸ್ವಾಮಿ ಎಂಬುವರ ಮೇಲೆ ಹೆಬ್ಬಾಳು ಕ್ಷೇತ್ರದ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹಾಗೂ ಅತನ ಸ್ನೇಹಿತರಾದ ರಮೇಶ, ಸಚಿನ್ ಇತರೆ ಇಬ್ಬರಿಂದ ಹಲ್ಲೆಗೀಡಾಗಿ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯೆ ಶೋಭಾ ಶಾಸಕರ ಅನುದಾನದಲ್ಲಿ ಎಂ. ಹುಣಸಿಕೆರೆ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ೨೦ ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಹಣ ಬಿಡುಗಡೆಯಾಗಿತ್ತು ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹಾಗೂ ನಮಗೂ ಕಳೆದ ೧೫ ದಿನಗಳ ಹಿಂದೆ ಸಂಘರ್ಷ ಉಂಟಾಗಿತ್ತು. ಸದಸ್ಯರ ಅನುಮತಿಯಂತೆ ಕಾಮಗಾರಿಯನ್ನು ಗಿರೀಶರವರಿಗೆ ನೀಡಲಾಗಿದೆ. ದಲಿತ ಸದಸ್ಯೆಯಾಗಿರುವ ನನಗೆ ಪಂಚಾಯಿತಿಯಿಂದ ಯಾವುದೇ ಕಾಮಗಾರಿ ಮಾಡಲು ಬಿಡದೆ ಗಿರೀಶರವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಕಾಟಾಚಾರದ ರಸ್ತೆ ಕೆಲಸ ಪ್ರಾರಂಭಿಸಿದ ಗುತ್ತಿಗೆದಾರರನ್ನು ಕೆಲಸ ನಿಲ್ಲಿಸುವಂತೆ ಕೇಳಿದಾಗ ನನ್ನ ಪತಿ ಹಾಗೂ ಅವರ ಸಹೋದರನ ಮೇಲೆ ಜಾತಿ ನಿಂದನೆ ಮಾಡಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಮನ ಬಂದಂತೆ ಹಲ್ಲೆ ಮಾಡಲಾಗಿದೆ ಎಂದು ತಿಳಿಸಿದರು.
ರಾತ್ರಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಾಗ ಅದೇ ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ಎರಡನೇ ಬಾರಿಗೆ ಹಲ್ಲೆ ಮಾಡಿರುವುದು ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಮೂವರು ವ್ಯಕ್ತಿಗಳು ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದು, ರಕ್ಷಣೆ ನೀಡುವಂತೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದ್ದು, ಹಲ್ಲೆ ಮಾಡಿರುವವ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.